CrimeKannada NewsKarnataka NewsLatest

*ಮನ್‌ಮುಲ್ ಹಾಲಿನಪುಡಿ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್*: *ಕೊರತೆ ಮುಚ್ಚಿಹಾಕಲು ಕಲಬೆರಕೆ ಪುಡಿ ತಂದಿದ್ದ ಆರೋಪಿಗಳು!*

ಪ್ರಗತಿವಾಹಿನಿ ಸುದ್ದಿ: ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸಂಸ್ಥೆಯಲ್ಲಿ ಉಂಟಾಗಿದ್ದ ಹಾಲಿನಪುಡಿ ದಾಸ್ತಾನು ಕೊರತೆಯನ್ನು ಮುಚ್ಚಿಹಾಕಲು ಕಲಬೆರಕೆ ಪುಡಿ ತಂದು ಇರಿಸಲಾಗಿತ್ತು ಎಂಬ ಆರೋಪದ ಬೆನ್ನಲ್ಲೇ, ಮನ್‌ಮುಲ್‌ನ ಹಾಲಿನಪುಡಿ ಚೀಲಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮನ್‌ಮುಲ್‌ನ ಹಾಲಿನಪುಡಿ ಸಾಗಣೆ ವಾಹನಗಳ ಮೂಲಕವೇ ಖಾಸಗಿ ವ್ಯಕ್ತಿಗಳಿಗೆ ಪುಡಿ ತಲುಪಿಸಲಾಗುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಅಕ್ರಮ ಮಾರಾಟದಿಂದ ಬಂದ ಹಣವನ್ನು ಮನ್‌ಮುಲ್‌ನ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಪ್ರದೀಪ್ ಜಾಧವ್ ಸೇರಿದಂತೆ ಕೆಲವರು ಹಂಚಿಕೊಳ್ಳುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಮನ್‌ಮುಲ್ ಮೇಲಧಿಕಾರಿಗಳ ಪರಿಶೀಲನೆ ಹಾಗೂ ಆಡಿಟ್ ವೇಳೆ ಹಾಲಿನಪುಡಿ ದಾಸ್ತಾನಿನಲ್ಲಿ ಭಾರಿ ಕೊರತೆ ಪತ್ತೆಯಾಗಿತ್ತು. ಒಟ್ಟು 110.4 ಟನ್ ಹಾಲಿನಪುಡಿ ಕೊರತೆಯಾಗಿರುವುದು ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೊರತೆಯನ್ನು ಸರಿದೂಗಿಸಿ ಲೆಕ್ಕದಲ್ಲಿ ವ್ಯತ್ಯಾಸ ಕಾಣದಂತೆ ಮಾಡಲು 54.9 ಟನ್ ಕಲಬೆರಕೆ ಹಾಲಿನಪುಡಿಯನ್ನು ಖರೀದಿಸಿ ದಾಸ್ತಾನಿನಲ್ಲಿ ಇರಿಸಲಾಗಿತ್ತು ಎಂಬ ಆರೋಪವಿದೆ. ಆದರೂ 55.5 ಟನ್ ಹಾಲಿನಪುಡಿ ಕೊರತೆ ಉಳಿದಿದ್ದು, ಇದರಿಂದ ಮಂಡ್ಯ ಹಾಲು ಒಕ್ಕೂಟಕ್ಕೆ ಸುಮಾರು ₹2.88 ಕೋಟಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್‌ನ ಮಾಜಿ ಅಧಿಕಾರಿ ಪ್ರದೀಪ್ ಜಾಧವ್, ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಸಿಸ್ಟಮ್ ಆಪರೇಟರ್ ಶ್ರುತಿ, ಗೋಡೌನ್ ಮ್ಯಾನೇಜರ್ ರವಿ, ಉಸ್ತುವಾರಿ ಶ್ರೀನಿವಾಸ್, ಹಾಲಿನಪುಡಿ ಘಟಕದ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಶಿವಪ್ಪ ಅವರ ಆಪ್ತ ಸುರೇಶ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೋರ್ವ ಆರೋಪಿ ನಿದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಉಪ ವ್ಯವಸ್ಥಾಪಕ ರಾಮಕೃಷ್ಣಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಸದ್ಯ ಉಮ್ಮಡಹಳ್ಳಿ ಶಿವಪ್ಪ ಅವರನ್ನು ಮದ್ದೂರು ಪೊಲೀಸರು ಐದು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ದಾಸ್ತಾನು ಕೊರತೆ, ಹಾಲಿನಪುಡಿ ಸಾಗಣೆ ಹಾಗೂ ಖಾಸಗಿ ವ್ಯಕ್ತಿಗಳಿಗೆ ನಡೆದ ಅಕ್ರಮ ಮಾರಾಟದ ಕುರಿತು ವಿಚಾರಣೆ ಮುಂದುವರಿದಿದೆ.

ಏನಿದು ಮನ್‌ಮುಲ್ ಹಾಲಿನಪುಡಿ ಪ್ರಕರಣ?

ಮನ್‌ಮುಲ್‌ನ ಕೆನೆರಹಿತ ಹಾಲಿನಪುಡಿ ದಾಸ್ತಾನಿನಲ್ಲಿ ಕೊರತೆ ಕಂಡುಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಹಾಲಿನಪುಡಿ ಚೀಲಗಳನ್ನು ಸಂಸ್ಥೆಯಿಂದ ಅಕ್ರಮವಾಗಿ ಸಾಗಿಸಿ ಖಾಸಗಿ ಗೋದಾಮಿಗೆ ತಲುಪಿಸಿ, ಬಳಿಕ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ತನಿಖೆಯಲ್ಲಿ ಕೇಳಿಬಂದಿದೆ.

ದಾಸ್ತಾನಿನಲ್ಲಿ ಉಂಟಾದ ಕೊರತೆಯನ್ನು ಮುಚ್ಚಿಹಾಕಲು ಕಲಬೆರಕೆ ಹಾಲಿನಪುಡಿಯನ್ನು ತಂದು ಇರಿಸಲಾಗಿತ್ತು ಎಂಬ ಆರೋಪವೂ ಇದೆ. ಈ ಅಕ್ರಮಗಳಿಂದ ಮನ್‌ಮುಲ್‌ಗೆ ಸುಮಾರು ₹2.88 ಕೋಟಿ ನಷ್ಟವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 30ರಂದು ಮನ್‌ಮುಲ್ ಗುಣಮಟ್ಟ ನಿಯಂತ್ರಣ ವಿಭಾಗದ ಸಹಾಯಕ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ಮುಂದುವರಿದಂತೆ ಹಾಲಿನಪುಡಿ ಅಕ್ರಮ ಮಾರಾಟದ ಕುರಿತು ಮತ್ತಷ್ಟು ಮಾಹಿತಿ ಹೊರಬರುತ್ತಿದೆ.

*ಶಿವಣ್ಣ ಎದುರೇ ಪಟಾಕಿ ಬಾಕ್ಸ್ ಸ್ಫೋಟ*: *ಕೂದಲೆಳೆ ಅಂತರದಲ್ಲಿ ಪಾರಾದ ಹ್ಯಾಟ್ರಿಕ್‌ ಹೀರೋ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button