ಮುಂದಿನ 5 ವರ್ಷಗಳಲ್ಲಿ ಬೀಳಗಿ ರಾಜ್ಯದಲ್ಲಿ ನಂ.1 ಆಗಲಿದೆ : ಮುರುಗೇಶ ನಿರಾಣಿ
ಪ್ರಗತಿವಾಹಿನಿ ಸುದ್ದಿ, ಬೀಳಗಿ: ಮೊದಲ ಬಾರಿಗೆ ಚುನಾವಣೆಯಲ್ಲಿನ ಉತ್ಸಾಹ ಮತ್ತೊಮ್ಮೆ ಮರುಕಳಿಸಿದೆ. ಕಾರ್ಯಕರ್ತರ ಉತ್ಸಾಹ ಜನಸ್ಪಂದನೆ ನೋಡಿದರೆ ಹೃದಯ ತುಂಬಿ ಬರುತ್ತದೆ. ಮನೆ ಮಗನಾಗಿ ಬೆಳೆಸಿದ ನನ್ನ ಮತಕ್ಷೇತ್ರದ ಜನತೆಯ ಅಭಿಮಾನ ದೊಡ್ಡದು ಎಂದು ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.
ಹಳೆ ಕೊರ್ತಿ, ಹಳೇ ಗೋವಿನದಿನ್ನಿ, ಹಳೆ ಟಕ್ಕಳಕಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ೨೦೦೪ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಜನರೆಲ್ಲ ಅಭೂತಪೂರ್ವ ಬೆಂಬಲ ನೀಡಿ ಬೆನ್ನಿಗೆ ನಿಂತಿದ್ದರು. ಅದು ಈಗ ಈ ಬಾರಿ ಮತ್ತೊಮ್ಮೆ ಮರುಕಳಿಸಿದೆ. ಕಳೆದ ೨೦ ವರ್ಷಗಳ ಅವಧಿಯಲ್ಲಿ ನನ್ನ ಮನೆ ಬಾಗಿಲಿಗೆ ಬಂದ ಪ್ರತಿಯೊಬ್ಬರಿಗೂ ನನ್ನ ಕೈಲಾದ ಸಹಾಯ ಮಾಡಿ, ಎಲ್ಲ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಯಾವುದೇ ಗ್ರಾಮಗಳಿಗೂ ತಾರತಮ್ಯ ಮಾಡದೇ ಅಭಿವೃದ್ದಿ ಕಾರ್ಯಗಳನ್ನು ಹಂಚಿಕೆ ಮಾಡಿದ್ದೇನೆ. ಪಾರದರ್ಶಕ ಹಾಗೂ ಪ್ರಜಾಸಮ್ಮತ ಆಡಳಿತ ನನ್ನ ಗುರಿಯಾಗಿತ್ತು. ಅದರಂತೆ ನಡೆದುಕೊಂಡಿದ್ದೇನೆ. ನನ್ನ ಗೆಲುವಿಗಾಗಿ ಕಾರ್ಯಕರ್ತರು ಉರಿ ಬಿಸಿಲು ಲೆಕ್ಕಿಸದೇ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಹನುಮ ಬಲವಿದೆ. ಭಜರಂಗಿಯ ಆಶಿರ್ವಾದ ಈ ಬಾರಿ ನನ್ನನ್ನು ಗೆಲ್ಲಿಸುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ಸಿಗರು ನಮ್ಮ ಭಜರಂಗಿಗಳನ್ನು ಕೆಣಕಿ ತಮ್ಮ ಅವನತಿಯನ್ನು ತಾವೇ ತಂದುಕೊಂಡಿದ್ದಾರೆ. ಕೆಸರಿಯನ್ನು ಎದುರು ಹಾಕಿಕೊಂಡವರು ಇತಿಹಾಸದಲ್ಲಿ ಅಳಿದು ಹೋಗಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಈ ತಪ್ಪು ಮಾಡುತ್ತಿದೆ. ಈ ಬಾರಿ ಜನ ಸಹಿಸುವುದಿಲ್ಲ. ಹೀಗಾಗಿ ಮೇ.೧೩ ರಂದು ಕಾಂಗ್ರೇಸ್ ಕರ್ನಾಟಕದಲ್ಲಿ ಆ ಅಳಿದು ಹೋದವರ ಪಟ್ಟಿಗೆ ಸೇರುತ್ತದೆ. ಕರ್ನಾಟಕದಲ್ಲಿ ಹನುಮಬಲದ ರಾಮರಾಜ್ಯ ಬಿಜೆಪಿ ನೇತೃತ್ವದಲ್ಲಿ ನಿರ್ಮಾಣವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೀಳಗಿಯಲ್ಲಿಯೂ ಕಾಂಗ್ರೆಸ್ ಪಾಳಯ ಖಾಲಿಯಾಗುತ್ತಿರುವುದನ್ನು ಕಂಡು ಜೆ. ಟಿ. ಪಾಟೀಲ ಹತಾಶರಾಗಿದ್ದಾರೆ. ಅಭಿವೃದ್ದಿಯನ್ನು ಸಹಿಸದ ಮನಸ್ಥಿತಿಯನ್ನು ಜನರು ಒಪ್ಪಲು ಸಿದ್ಧವಿಲ್ಲ. ಹೀಗಾಗಿ ಜನ ಕಾಂಗ್ರೆಸ್ ಅಭ್ಯರ್ಥಿ ಬಗೆಗಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಪ್ರಜ್ಞಾವಂತ ಬೀಳಗಿ ಜನತೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ. ನಾನು ಮಾಡಿದ ಅಭಿವೃದ್ದಿ ಕಾರ್ಯಗಳನ್ನು ಜನ ಒಪ್ಪಿದ್ದಾರೆ. ವಿರೋಧ ಪಕ್ಷದ ಸರ್ಟಿಫಿಕೇಟ್ ನನಗೆ ಅವಶ್ಯವಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದ ನಿಂಗನೂರ, ಈರಣ್ಣ ಗಿಡ್ಡಪ್ಪಗೋಳ, ಶ್ರೀಧರ ಕಲ್ಲೂರ, ಪ್ರಮೀಳಾ ಘೋರ್ಪಡೆ, ದ್ರಾಕ್ಷಾಯಣಿ ಜಂಬಗಿ, ರಾಮಣ್ಣ ಢವಳೇಶ್ವರ, ಹೂಳಪ್ಪ ಪೂಜೇರಿ, ರುದ್ರಪ್ಪ ಮನಗೂಳಿ, ಚನ್ನಪ್ಪ ಮನಗೂಳಿ, ಗಿಡ್ಡಪ್ಪಗೌಡ ಪಾಟೀಲ, ಸಿದ್ದಲಿಂಗಪ್ಪ ನಾಯ್ಕರ, ಸಿದ್ದಲಿಂಗಪ್ಪ ಮಮದಾಪೂರ ಸೇರಿ ಹಲವರು ಉಪಸ್ಥಿತರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ : ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಕೊರ್ತಿ ಗ್ರಾಮದ ವಿಠ್ಠಲ ಮನಗೂಳಿ, ಯಲ್ಲಪ್ಪ ದಳವಾಯಿ, ಶ್ರೀಶೈಲ ತಳವಾರ ಹಾಗೂ ಹದರಿಹಾಳ ಗ್ರಾಮದ ದೇವೆಂದ್ರಪ್ಪ ಬಡಿಗೇರ ಕುಟುಂಬಸ್ಥರು ಹಾಗೂ ಅವರ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ