*ಪಡಿತರ ಪಡೆಯಲು ಬಯೋ ಮೆಟ್ರಿಕ್ ಕಡ್ಡಾಯ; ದುರ್ಬಳಕೆ ತಪ್ಪಿಸಲು ಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಬೇಕು. ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮನ್ವಯದೊಂದಿಗೆ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಮಾ.28) ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹಾಗೂ ಫಲಾನುಭವಿಗಳೊಂದಿಗೆ ಮುಕ್ತ ಸಂವಾದ ನಡೆಸಬೇಕು. ಯೋಜನೆಗಳ ಪ್ರಯೋಜನ ಪಡೆಯುವಲ್ಲಿ ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿದ್ದರೆ ತಕ್ಷಣ ಸ್ಪಂದಿಸಬೇಕು ಎಂದು ಹೇಳಿದರು.
ಯೋಜನೆಯಿಂದ ಹೊರಗುಳಿದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಯೋಜನೆಯ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಕಾರ್ಯಪ್ರವೃತ್ತರಾಗಬೇಕು ಎಂದು ನಾವಲಗಟ್ಟಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಓಟಿಪಿ ಮೂಲಕ ಪಡಿತರ ಪಡೆಯಲು ಈ ಮುಂಚೆ ಅನುಮತಿ ಇತ್ತು. ಆದರೆ ದುರ್ಬಳಕೆ ಆಗುತ್ತಿರುವ ಕಾರಣ ಸರ್ಕಾರದಿಂದ ಓಟಿಪಿ ಮೂಲಕ ಪಡಿತರ ಪಡೆಯಲು ಬಯೋ ಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಬಯೋಮೆಟ್ರಿಕ್ ತೊಂದರೆ ಇರುವ ಪಡಿತರದಾರರಿಗೆ ಮಾತ್ರ ಒಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳ ಸಮಿತಿಯ ಜಿಲ್ಲಾ, ತಾಲೂಕಾ ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ತಾಲೂಕುವಾರು ಅನಿಸಿಕೆ ತಿಳಿಸಲು ಅಥವಾ ದೂರುಗಳನ್ನು ನೋಂದಣಿ ಮಾಡಲು ಗೂಗಲ್ ಸ್ಪ್ರೆಡ್ ಶೀಟ್ ಲಿಂಕ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಎದುರಾದಲ್ಲಿ ಲಿಂಕ್ ಮೂಲಕ ದೂರು ಸಲ್ಲಿಸಬಹುದಾಗಿದೆ.
ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳಡಿ ಪ್ರತಿ ಕುಟುಂಬಕ್ಕೆ ಸರಿ ಸುಮಾರು 10 ಸಾವಿರ ವರೆಗೆ ಆರ್ಥಿಕ ಹೊರೆ ಕಡಿಮೆಯಾಗಿದೆ. ಆಯಾ ಇಲಾಖೆಗಳಲ್ಲಿ ಕೆಲವು ತಾಂತ್ರಿಕ ತೊಂದರೆ ಇರುವ ಕಾರಣ ಫಲಾನುಭವಿಗಳು ಸಹಕರಿಸಲು ಗ್ಯಾರಂಟಿ ಸಮಿತಿ ಸದಸ್ಯರು ತಿಳಿಹೇಳಬೇಕು. ಆಯಾ ಇಲಾಖೆಯಿಂದ ನಿಗದಿತ ಅವಧಿಯೊಳಗೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ಹೇಳಿದರು.
ಯುವನಿಧಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ತಾಲೂಕಾ ಮಟ್ಟದಲ್ಲಿ ಕಾಲೇಜುಗಳಿಗೆ ಗ್ಯಾರಂಟಿ ಸಮಿತಿ ಸದಸ್ಯರು ಭೇಟಿ ನೀಡಿ ಪದವೀಧರ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಿದೆ. ಎಲ್ಲ ಪದಾಧಿಕಾರಿಗಳು ನಮ್ಮ ವ್ಯಾಪ್ತಿಯಲ್ಲಿ ಸಮಪರ್ಕವಾಗಿ ಕಾರ್ಯ ನಿರ್ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಕಾರ್ಯ ನಿರ್ವಹಿಸಬೇಕು ಎಂದು ಜಿ.ಪಂ ಸಿಇಓ ರಾಹುಲ್ ಶಿಂಧೆ ತಿಳಿಸಿದರು.
ಖಾನಾಪೂರ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಾತನಾಡಿ ಖಾನಾಪೂರ ತಾಲೂಕಿನ ಕೆಲವು ಪಡಿತರ ಅಂಗಡಿಗಳಲ್ಲಿ ಸರಿಯಾದ ತೂಕದಲ್ಲಿ ಪಡಿತರ ವಿತರಣೆ ಮಾಡುತ್ತಿಲ್ಲ. ವಿಚಾರಿಸಿದರೆ ಸಮಂಜಸವಲ್ಲದ ಉತ್ತರ ನೀಡುತ್ತಿದ್ದಾರೆ ಹಾಗಾಗಿ ಅಂತಹ ಅಂಗಡಿಗಳ ವಿರುದ್ಧ ದೂರುಗಳನ್ನು ಸ್ವೀಕರಿಸಿ ಕ್ರಮ ಜರುಗಿಸಬೇಕು ಎಂದು ವಿನಂತಿಸಿದರು.
ಈಗಾಗಲೇ ನೀಡಲಾಗುತ್ತಿರುವ 5 ಕೆ.ಜಿ ಅಕ್ಕಿ ಬದಲಿಗೆ ಹಣ ಸಂದಾಯ ಮಾಡಲಾಗುತ್ತಿದ್ದು, ಡಿಸೆಂಬರ್ ಮಾಹೆಯಲ್ಲಿ ಹಣ ನೀಡಲಾಗಿದೆ ಜನವರಿ ತಿಂಗಳು ಮಾತ್ರ ಬಾಕಿಯಿದೆ. ಫೆಬ್ರುವರಿ ತಿಂಗಳಿನಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 5 ಕೆ.ಜಿ ಅಕ್ಕಿ ನೀಡಲಾಗುತ್ತಿದೆ ಎಂದು ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ನಾಯಕ ವಿವರಿಸಿದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಿರ್ವಹಿಸಿದರು.
ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ರಾಹುಲ್ ಕಾಂಬಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್. ನಾಗರಾಜ್, ಹೆಸ್ಕಾಂ, ಸಾರಿಗೆ ಸಂಸ್ಥೆ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಗ್ಯಾರಂಟಿ ಯೋಜನೆಗಳ ವಿಷಯ ನಿರ್ವಾಹಕ ಪ್ರಶಾಂತ ಕಲ್ಲಪಗೌಡರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.