ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ 51 ಎನ್ ಜಿಓಗಳು ಅಕ್ಷರ ದಾಸೋಹ ಯೋಜನೆಗಳನ್ನು 19 ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ವಿಧಾನಸೌಧದ ಶಿಕ್ಷಣ ಸಚಿವರ ಕಚೇರಿಯಲ್ಲಿ ಶನಿವಾರ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಸಭೆ ಜರುಗಿತು.
ಈ ಸಭೆಯಲ್ಲಿ ಕೆಎಸ್ ಎಂಎಫ್ ಒಕ್ಕೂಟದ ಅಧ್ಯಕ್ಷರಾದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ರಾಜ್ಯದಲ್ಲಿ 51 ಎನ್ ಜಿಓಗಳು ಅಕ್ಷರ ದಾಸೋಹ ಯೋಜನೆಗಳನ್ನು 19 ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿವೆ. ಅಕ್ಷರ ದಾಸೋಹ ಯೋಜನೆ ಯಶಸ್ವಿಗೆ ಸಚಿವರು ಹಾಗೂ ಸರಕಾರದ ಸಹಕಾರ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಸಚಿವರಿಗೆ ಕರ್ನಾಟ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಸಂಸ್ಥೆ ವತಿಯಿಂದ ಸನ್ಮಾಸಿ ಗೌರವಿಸಲಾಯಿತು. ಸನ್ಮಾನ ಹಾಗೂ ಮನವಿ ಸ್ವೀಕರಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಇಂದು 51 ಎನ್ ಜಿಒಗಳ ನೇತೃತ್ವ ವಹಿಸಿಕೊಂಡು ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನ ಮಾಡುತ್ತಿರುವುದು ನಮಗೆ ಸಂತಸ ತಂದಿದೆ. ಬದ್ಧತೆ, ಸಿದ್ಧತೆ, ಜಾಗೃತೆ ಇದು ಒಕ್ಕೂಟದ ಉದ್ದೇಶ. ಅದೇ ನಿಟ್ಟಿನಲ್ಲಿ ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಶುದ್ಧ ಮತ್ತು ರುಚಿಯಾದ ಆಹಾರವನ್ನು ಸಿದ್ಧ ಮಾಡಿ ಜಾಗೃತೆಯಿಂದ ಮುಟ್ಟಿಸುವ ಕಾರ್ಯದಲ್ಲಿ ಮೊದಲಿನಿಂದಲೂ ಕೂಡ ಸ್ವಯಂ ಸೇವಾ ಸಂಸ್ಥೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾ ಬಂದಿವೆ. ಹಾಗೆಯೇ ಮುಂದುವರೆಸಿಕೊಂಡು ಹೋಗಲು ಸಲಹೆ ನೀಡಿದರು ಎಂದರು.
ಅಕ್ಷರ ದಾಸೋಹ ಯೋಜನೆಯ ರಾಜ್ಯ ಜಂಟಿ ನಿರ್ದೇಶಕರಾದ ಅನಿತಾ ನಾಜರೆ ಅವರು ಸಭೆಯಲ್ಲಿ ಭಾಗವಹಿಸಿ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ವ ಸಹಾಯ ಗುಂಪುಗಳು ಅಕ್ಷರ ದಾಸೋಹ ಯೋಜನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಸ್ವಯಂ ಸೇವಾ ಸಂಸ್ಥೆಗಳು 9 ಲಕ್ಷ 50 ಸಾವಿರ ಮಕ್ಕಳಿಗೆ ಸೇರಿದಂತೆ ಒಟ್ಟಾರೆ 15 ಲಕ್ಷ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದಂತೆ, ಆದಷ್ಟು ಬೇಗ ಸ್ವಯಂ ಸೇವಾ ಸಂಸ್ಥೆಗಳಿಗೆ ಒಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ ಸಭೆಯಲ್ಲಿ ಭಾಗವಹಿಸಿ ಒಕ್ಕೂಟದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಕೆ.ಭೀಮಾ ಅವರು, ಸ್ವಯಂ ಸೇವಾ ಸಂಸ್ಥೆಗಳಿಗೆ ಬೇಕಾಗುವ ಸವಲತ್ತುಗಳನ್ನು ಸರಕಾರ ಒದಗಿಸಲಿ ಎಂದರು.
ಜಂಟಿ ಕಾರ್ಯದರ್ಶಿ ಅಪ್ಪಾಜಿ ಗೌಡಾ ಹಾಗೂ ನಿರ್ದೇಶಕರಾದ ರವೀಂದ್ರ ಕುಮಾರ, ಖಜಾಂಚಿಗಳಾದ ಕಲ್ಲಪ್ಪ ಬೋರಣ್ಣವರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ