ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಬಿಟ್ ಕಾಯಿನ್ ವಿಚಾರದಲ್ಲಿ ಅಪರಾಧ ಆಗಿದೆಯೇ ಇಲ್ಲವೇ ಎಂಬುದನ್ನು ಹೇಳುವುದು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ನಾಯಕರು ಮುಚ್ಚಿಟ್ಟಿದ್ದ ಹಗರಣ ಹೊರ ತಂದಿದ್ದು ಬಿಜೆಪಿ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಶ್ರೀಕಿ 2018ರಿಂದಲೇ ಹ್ಯಾಕ್ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೊಹಮ್ಮದ್ ನಲಪಾಡ್ ಬಂಧನವಾಗಿತ್ತು. ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿರಲಿಲ್ಲ ಯಾಕೆ? ಇವರದ್ದೇ ಸರ್ಕಾರ ಇದ್ದಾಗಲೂ ಹ್ಯಾಕರ್ ಶ್ರೀಕಿ ವಿರುದ್ಧ ಕ್ರಮ ಕೈಗೊಳ್ಳದೇ ಬಿಟ್ಟಿದ್ದು ಯಾಕೆ? ಕಾಂಗ್ರೆಸ್ ನವರ ಮೇಲೆ ಅಂದು ಯಾರ ಒತ್ತಡ ಇತ್ತು? ಎಂದು ಪ್ರಶ್ನಿಸಿದರು.
ಕ್ರಿಪ್ಟೋ ಕರೆನ್ಸಿ ಸಂಬಂಧ ಶ್ರೀಕಿಯನ್ನು ಬಂಧಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಶ್ರೀಕಿಯನ್ನು ಬಂಧಿಸಿದ್ದೇವೆ. ಬಿಟ್ ಕಾಯಿನ್ ಸೀಜ್ ಮಾಡಲು ಅನುಮತಿ ಪಡೆಯಲಾಗಿದೆ. ಎಲ್ಲಾ ದಾಖಲೆಗಳನ್ನು ಕೋರ್ಟ್ ಗೆ ಒಪ್ಪಿಸಲಾಗಿದೆ. ಜಾಮೀನಿನ ಮೇಲೆ ಹೊರಗಿರುವ ಶ್ರೀಕಿ ಮೇಲೆ ನಿಗಾ ವಹಿಸಲಾಗಿದೆ ಎಂದರು.
ಶ್ರೀಕಿಗೆ ಪೊಲೀಸರು ಡ್ರಗ್ಸ್ ಕೊಟ್ಟಿದ್ದಾಗಿ ಆರೋಪ ಕೇಳಿಬಂದಿದೆ. ಆದರೆ ಶ್ರೀಕಿ ಕೋರ್ಟ್ ನಲ್ಲಿ ಇದನ್ನು ಒಪ್ಪಿಕೊಂಡಿಲ್ಲ. ಶ್ರೀಕಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಈ ವೇಳೆ ಶ್ರೀಕಿ ಡ್ರಗ್ಸ್ ಪಡೆದುಕೊಂಡಿಲ್ಲ ಎಂದು ವರದಿ ಬಂದಿದೆ. ವಶ ಪಡಿಸಿಕೊಂಡಿದ್ದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕಳ್ಳತನವಾಗಿದ್ದರೆ ದೂರು ದಾಖಲು ಮಾಡಬೇಕಿತ್ತು. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರ ಕೈವಾದದ ಬಗ್ಗೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಅನಗತ್ಯ ಆರೋಪ ಮಾಡುವ ಬದಲು ಮೊದಲು ಈ ಬಗ್ಗೆ ಮೊದಲು ದಾಖಲೆಗಳನ್ನು ನೀಡಲಿ. ದಾಖಲೆ ನೀಡಿದ ಒಂದು ಗಂಟೆಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಳಗಾವಿಯಲ್ಲಿ ಕಾರಿಗೆ ಕಲ್ಲೆಸೆದು ಗಾಜು ಒಡೆಯುತ್ತಿದ್ದ ವ್ಯಕ್ತಿ ಪೊಲೀಸ್ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ