ಪ್ರಗತಿವಾಹಿನಿ ಸುದ್ದಿ: ಬಹುಕೋಟಿ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ಎಸ್‌ಐಟಿ ನೋಟಿಸ್ ನೀಡಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ. ಇದರಿಂದಾಗಿ ನಲಪಾಡ್ ಅವರಿಗೆ ಬಂಧನ ಭೀತಿ ಶುರುವಾಗಿದೆ.
ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗೆ ನಲಪಾಡ್ ವ್ಯಾವಹಾರಿಕ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಆರೋಪ ಹಿನ್ನೆಲೆಯಲ್ಲಿ ನಲಪಾಡ್ ಅವರಿಗೆ ಫೆಬ್ರವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿದೆ.
ಸಾಮಾನ್ಯವಾಗಿ ಆರೋಪಿತರಿಗೆ ಈ ಸೆಕ್ಷನ್ ಅಡಿ ತನಿಖಾಧಿಕಾರಿ ನೋಟಿಸ್ ನೀಡುತ್ತಾರೆ. ಹೀಗಾಗಿ ಅದೇ ಸೆಕ್ಷನ್ ಅಡಿ ನಲಪಾಡ್ ಅವರಿಗೆ ಎರಡನೇ ಬಾರಿಗೆ ಎಸ್‌ಐಟಿ ವಿಚಾರಣೆಗೆ ಕರೆದಿರುವುದು ಬಂಧನ ಭೀತಿಗೆ ಕಾರಣವಾಗಿದೆ. ಕೆಲ ತಿಂಗಳ ಹಿಂದೆ ಕೂಡ ಬಿಟ್ ಕಾಯಿನ್ ಹಗರಣ ಸಂಬಂಧ ನಲಪಾಡ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸಿ ಹೇಳಿಕೆ ಪಡೆದಿತ್ತು. ಹ್ಯಾಕರ್ ಶ್ರೀಕಿಯಿಂದ ಕೋಟ್ಯಂತರ ರುಪಾಯಿಯನ್ನು ನಲಪಾಡ್ ಪಡೆದಿದ್ದಾರೆ ಎಂಬ ಆಪಾದನೆ ಸಹ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ