Karnataka NewsLatest

ಬಿಜೆಪಿ ವಿಶ್ವಾಸ 12- 13 ಕ್ಷೇತ್ರ?

ಎಂ.ಕೆ.ಹೆಗಡೆ, ಬೆಳಗಾವಿ –  17 ಶಾಸಕರು ಕಾಂಗ್ರೆಸ್, ಜೆಡಿಎಸ್ ನಿಂದ ಹೊರಬಿದ್ದು ಅನರ್ಹರಾಗಿದ್ದರಿಂದ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಿದೆ. ಅವುಗಳ ಪೈಕಿ 15 ಕ್ಷೇತ್ರಗಳಲ್ಲಿ ಗುರುವಾರ ಚುನಾವಣೆ ನಡೆಯಲಿದೆ.

ನವೆಂಬರ್ 11ರಂದು ಅಧಿಸೂಚನೆ ಹೊರಬಿದ್ದ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗುವವರೆಗೆ ಬಂದು ನಿಂತಿದೆ. ಸಮ್ಮಿಶ್ರ ಸರಕಾರ ಪತನವಾಗಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೇರಿದ್ದೇ ಅನರ್ಹ ಶಾಸಕರ ಆಟದಿಂದಾಗಿ. ಹಾಗಾಗಿ ಈ ಎಲ್ಲ ಅನರ್ಹರ ಪರವಾಗಿ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ.

ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಎಲ್ಲ ಕ್ಷೇತ್ರಗಳನ್ನೂ 2-3 ಬಾರಿ ಸುತ್ತಿದ್ದಾರೆ. ಹೊದಲ್ಲೆಲ್ಲ 15ಕ್ಕೆ 15 ಸ್ಥಾನವನ್ನೂ ನಾವು ಗೆಲ್ಲುವುದು ಖಚಿತ, ಅಂತರ ಎಷ್ಟು ಎನ್ನುವುದು ಮಾತ್ರ ಗೊತ್ತಾಗಬೇಕಿದೆ ಅಷ್ಟೆ ಎನ್ನುತ್ತ ಪ್ರಚಾರ ನಡೆಸಿದ್ದಾರೆ.

ಇದೇ ವೇಳೆ ಜಾತ್ಯತೀತ ಜನತಾದಳ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, ಬಹುತೇಕ ಕಡೆ ತಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. 15ಕ್ಕೆ 15 ಕ್ಷೇತ್ರಗಳಲ್ಲೂ ಅನರ್ಹ ಶಾಸಕರು ಮನೆಗೆ ಹೋಗಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದಾರೆ.

ಕಾಂಗ್ರೆಸ್ ಪಾರ್ಟಿ 12 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಬಿಜೆಪಿ ಸರಕಾರ ಪತನವಾಗಲಿದೆ. ಮತ್ತೆ ತಮ್ಮದೇ ಸರಕಾರ ಬರಲಿದೆ ಎನ್ನುತ್ತ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಇವರ ಲೆಕ್ಕಾಚಾರದ ಮೇಲೆ ಮತ್ತೊಮ್ಮೆ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ವದಂತಿಯೂ ದಟ್ಟವಾಗಿದೆ.

ಬಿಜೆಪಿ ಆಂತರಿಕ ಸಮೀಕ್ಷೆ

ಭಾರತೀಯ ಜನತಾ ಪಾರ್ಟಿಗೆ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಸರಕಾರದ ಅಸ್ಥಿತ್ವವೇ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ. ಹಾಗಾಗಿ ಪಕ್ಷ ಪ್ರತಿ ಕ್ಷೇತ್ರಕ್ಕೂ ಮಂತ್ರಿಗಳನ್ನು, ಶಾಸಕರನ್ನು, ಮುಖಂಡರನ್ನು ಉಸ್ತುವಾರಿ ಮಾಡಿ, ಬಿಡುವಿಲ್ಲದಂತೆ ಓಡಾಡಿಸಿದೆ. ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದ ಜವಾಬ್ದಾರಿ ನೀಡಿದೆ.

ಇದರ ಜೊತೆಗೆ ಪಕ್ಷ ಯಾವ್ಯಾವ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎನ್ನುವ ಕುರಿತು 3 ಬಾರಿ ಆಂತರಿಕ ಸಮೀಕ್ಷೆಯನ್ನೂ ನಡೆಸಲಾಗಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ 10-13 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ. ಸರಕಾರ ಉಳಿಯುವುದಕ್ಕೆ ಕನಿಷ್ಟ 8 ಸ್ಥಾನ ಗೆಲ್ಲಬೇಕಿದೆ. ಹಾಗಾಗಿ 10 ಸ್ಥಾನ ಗೆದ್ದು ಸರಕಾರ ಉಳಿಸಿಕೊಳ್ಳುವುದಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವುದು ಪಕ್ಷದ ಗಟ್ಟಿ ನಂಬಿಕೆ.

ಇನ್ನುಳಿದ 5 ಕ್ಷೇತ್ರಗಳ ಪೈಕಿ 2ರಲ್ಲಿ ಶೇ.60ರಷ್ಟು ಗೆಲ್ಲುವ ವಿಶ್ವಾಸವಿದೆ. ಒಂದರಲ್ಲಿ 50ಃ50 ಸಾಧ್ಯತೆ ಇದೆ. ಇನ್ನೆರಡರಲ್ಲಿ ಗೆಲ್ಲುವ ಸಾಧ್ಯತೆ ಕ್ಷೀಣಿಸಿದೆ. ಹುಣಸೂರು ಮತ್ತು ಶಿವಾಜಿನಗರದಲ್ಲಿ ಬಿಜೆಪಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ಕೆ.ಆರ್.ಪೇಟೆಯಲ್ಲಿ ನಿರ್ಧರಿಸಲಾಗದ ಸ್ಥಿತಿಯಲ್ಲಿದೆ.  ಗೋಕಾಕ ಮತ್ತು ಕಾಗವಾಡದಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯನ್ನು ಪಕ್ಷ ಹೊಂದಿದೆ.

ಅಥಣಿ, ಯಲ್ಲಾಪುರ ಸೇರಿದಂತೆ ಉಳಿದ 10 ಕಡೆಗಳಲ್ಲಿ ಸುಲಭವಾಗಿ ಗೆಲ್ಲಲಾಗುವುದು ಎನ್ನುವುದು ಬಿಜೆಪಿಯ ಆಂತರಿಕ ಸಮೀಕ್ಷೆಯ ವರದಿ.

ವಿಪಕ್ಷಗಳ ವೈಫಲ್ಯ

ಬಿಜೆಪಿ ಈ ಬಾರಿ ಚುನಾವಣೆಗೆ ಮುಖ್ಯವಾಗಿ ಉರುಳಿಸಿದ್ದು ಜಾತಿಯ ದಾಳ. ವೀರಶೈವ ಲಿಂಗಾಯತ ನಾಯಕ ಯಡಿಯೂರಪ್ಪನವರ ಸರಕಾರವನ್ನು ಉಳಿಸಲು ವೀರಶೈವರೆಲ್ಲ ತಪ್ಪದೆ ಬಿಜೆಪಿಗೆ ಮತ ನೀಡಬೇಕಂದು ಸ್ವತಃ ಯಡಿಯೂರಪ್ಪನವರೇ ಹೋದಲ್ಲೆಲ್ಲ ಭಾಷಣ ಮಾಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ನಮ್ಮದೇ ಸರಕಾರವಿದೆ, ಹಾಗಾಗಿ ಅಭಿವೃದ್ಧಿಗೆ ದುಡ್ಡು ಹರಿದುಬರಲಿದೆ ಎಂದು ಪ್ರಚಾರ ಮಾಡುತ್ತಿದೆ. ವಿಶೇಷವೆಂದರೆ ಪ್ರವಾಹ ಪರಿಹಾರದಲ್ಲಿನ ಬಿಜೆಪಿ ಸರಕಾರದ ವೈಫಲ್ಯವನ್ನು ಹೈಲೈಟ್ ಮಾಡುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ.

100 ದಿನಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇನೆ ಎಂದು ಯಡಿಯೂರಪ್ಪ ಹೇಳುತ್ತ ಹೋದರೂ ಅದನ್ನು ಕೌಂಟರ್ ಮಾಡುವ ಕೆಲಸವೂ ವಿಪಕ್ಷಗಳಿಂದಾಗಲಿಲ್ಲ.

ವಿರೋಧ ಪಕ್ಷಗಳು ಕೇವಲ ಆಪರೇಶನ್ ಕಮಲ ವಿಷಯವನ್ನು ಮಾತ್ರ ಹೋದಲ್ಲೆಲ್ಲ ಹೇಳುತ್ತ ಬಂದಿವೆ. ಅದೂ ಅಷ್ಟಾಗಿ ಜನರಿಗೆ ನಾಟಿದಂತೆ ಕಾಣುವುದಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಹೊರತುಪಡಿಸಿ ಬೇರೆ ಯಾವ ನಾಯಕರ ಪ್ರಚಾರವೂ ಜನರಿಗೆ ತಟ್ಟಲೇ ಇಲ್ಲ.

ಕಾಂಗ್ರೆಸ್ ಆಂತರಿಕ ಗೊಂದಲದಿಂದ ಹೊರಬಾರದ್ದರಿಂದ ಈ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಯೇ ಹೆಚ್ಚು. ಸ್ಟಾರ್ ಪ್ರಚಾರಕರೆಂದು ಘೋಷಿಸಲಾಗಿರುವ ಬಹುತೇಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಸ್ಟಾರ್ ಪ್ರಚಾರಕರನ್ನು ಗುರುತಿಸುವಲ್ಲಿ ವಿಫಲವಾಗಿದ್ದಷ್ಟೇ ಅಲ್ಲ, ಅವರನ್ನು ಪ್ರಚಾರದ ಕಣಕ್ಕಿಳಿಸುವಲ್ಲೂ ಪಕ್ಷ ವಿಫಲವಾಯಿತು. ಕೆಲವರು ಕಾಟಾಚಾರಕ್ಕೆನ್ನುವಂತೆ ಬಂದು ಹೋಗಿದ್ದಾರೆ. ಕೊನೆ ಕೊನೆಗಂತೂ ಕ್ಷೇತ್ರ ಖಾಲಿ ಖಾಲಿ ಕಾಣಿಸುವಂತಾಯಿತು.

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಸ್ಟಾರ್ ಗದ್ದಲ

ಸಿದ್ದರಾಮಯ್ಯ ದೂರವಿಟ್ಟು ಕೈ ಜೊತೆ ಹೊಂದಾಣಿಕೆ? – ದೇವೇಗೌಡ ಸುಳಿವು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button