ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಬಹುತೇಕ ಕ್ಷೇತ್ರಗಳಲ್ಲಿ ಬಹು ಸಂಖ್ಯೆಯ ಅಭ್ಯರ್ಥಿಗಳಿಂದಾಗಿ ಬಂಡಾಯ ಶಮನಗೊಳಿಸಲು ಪರದಾಡುತ್ತಿರುವ, ಕೇಂದ್ರ ಹಾಗೂ ರಾಜ್ಯದ ಆಡಳಿತಾರೂಢ ರಾಷ್ಟ್ರೀಯ ಪಕ್ಷ ಬಿಜೆಪಿ, ಚಿಕ್ಕೋಡಿ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯೇ ಇಲ್ಲದೆ ಅಕ್ಷರಶಃ ಕಂಗಾಲಾಗಿದೆ
ಚಿಕ್ಕೋಡಿಯಲ್ಲಿ ಕಾಂಗ್ರೆಸ್ ನ ಗಣೇಶ ಹುಕ್ಕೇರಿ ಹಾಲಿ ಶಾಸಕ. 5 ಬಾರಿ ಶಾಸಕರಾಗಿದ್ದ ಪ್ರಕಾಶ ಹುಕ್ಕೇರಿ 2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಮಗ ಗಣೇಶ ಹುಕ್ಕೇರಿ ಉಪ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ನಂತರ 2018ರ ಚುನಾವಣೆಯಲ್ಲಿ ಮರು ಆಯ್ಕೆಯೂ ಆಗಿದ್ದಾರೆ. ಈಗ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್ ಸದಸ್ಯರು. ಕಾಂಗ್ರೆಸ್ ಈ ಬಾರಿಯೂ ಗಣೇಶ ಹುಕ್ಕೇರಿ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ.
ಕಳೆದ ಚುನಾವಣೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಬಿಜೆಪಿಯಿಂದ ಸ್ಪರ್ಧಿಸಿ, 11 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ನಂತರ ಅವರು ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಈ ಬಾರಿ ಚಿಕ್ಕೋಡಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಬಿಜೆಪಿಯನ್ನು ಕಾಡುತ್ತಿದೆ. ಜೊಲ್ಲೆಯವರ ಪುತ್ರ ಬಸವಪ್ರಸಾದ ಅವರನ್ನು ಕಣಕ್ಕಿಳಿಸುವ ಪ್ರಸ್ತಾಪವಿದೆ. ಬಸವಪ್ರಸಾದ ಸಮರ್ಥರಿದ್ದರೂ, ತಂದೆ ಸಂಸದ, ತಾಯಿ ಸಚಿವೆ ಇರುವುದರಿಂದ, ಮತ್ತೆ ಮಗನಿಗೂ ಟಿಕೆಟ್ ಕೊಟ್ಟರೆ ಪಕ್ಷದ ಇಮೇಜ್ ಗೆ ದಕ್ಕೆಯಾಗಬಹುದೆನ್ನುವ ಆತಂಕ ಪಕ್ಷಕ್ಕಿದೆ.
ದುಂಡಪ್ಪ ಬೆಂಡವಾಡೆ, ದುಂಡಪ್ಪ ಇಂಗ್ಲಜೆ ಮತ್ತು ಅಪ್ಪಾಸಾಹೇಬ ಚೌಗಲೆ ಎನ್ನುವವರು ಅರ್ಜಿ ಸಲ್ಲಿಸಿದ್ದಾರಾದರೂ ಪಕ್ಷ ಈ ಯಾರನ್ನೂ ಪರಿಗಣಿಸಲು ಸಿದ್ಧವಿಲ್ಲ. 2013ರಲ್ಲಿ ಸ್ಪರ್ಧಿಸಿದ್ದ ಮಹಾಂತೇಶ ಕವಟಗಿಮಠ ಅವರನ್ನೇ ಕಣಕ್ಕಿಳಿಸಬೇಕೆಂದು ಬಿಜೆಪಿ ಚಿಂತನೆ ನಡೆಸಿದ್ದು, ಮಹಾಂತೇಶ ಕವಟಗಿಮಠ ಈ ಬಾರಿ ಕಣಕ್ಕಿಳಿಯಲು ಒಲ್ಲೆ ಎಂದಿದ್ದಾರೆ. ಆದರೆ ಬಿಜೆಪಿಗೆ ಪರ್ಯಾಯ ಆಯ್ಕೆ ಕಾಣುತ್ತಿಲ್ಲ. ಹಾಗಾಗಿ ಅವರ ಮನವೊಲಿಸುವ ಪ್ರಯತ್ನ ನಡೆದಿದೆ.
ಅನಿವಾರ್ಯವಾದರೆ ಬಿಜೆಪಿಯ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಅವರನ್ನು ಕಣಕ್ಕಿಳಿಸಬಹುದು. ಅವರು ಹುಕ್ಕೇರಿ ಕ್ಷೇತ್ರದ ಆಕಾಂಕ್ಷಿ. ಹುಕ್ಕೇರಿಯಲ್ಲಿ ಕತ್ತಿ ಕುಟುಂಬಕ್ಕೇ ಟಿಕೆಟ್ ಕೊಡಬೇಕೆನ್ನುವ ತೀರ್ಮಾನಕ್ಕೆ ಪಕ್ಷ ಬಂದರೆ ರಾಜೇಶ ನೇರ್ಲಿ ಚಿಕ್ಕೋಡಿಯಿಂದ ಕಣಕ್ಕಿಳಿಯಲು ಸಿದ್ಧರಾಗಬಹುದು.
ಒಟ್ಟಾರೆ, ಬೆಳಗಾವಿ ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿಂದಾಗಿ ಪಕ್ಷ ಕಂಗಾಲಾಗಿದ್ದರೆ, ಚಿಕ್ಕೋಡಿಯಲ್ಲಿ ಮಾತ್ರ ಸಮರ್ಥ ಅಭ್ಯರ್ಥಿಯೇ ಸಿಗದೆ ಮುಜುಗರಕ್ಕೀಡಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ