Belagavi NewsBelgaum NewsKannada NewsKarnataka NewsLatest

*ಬಡವರಿಗೆ ನೆರವಾಗಲೆಂದು ಕಾಂಗ್ರೆಸ್ ತಂದಿರುವ ನರೇಗಾ ಯೋಜನೆಯನ್ನು ಬಿಜೆಪಿ ಸತ್ಯನಾಶ ಮಾಡಲು ಹೊರಟಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ನರೇಗಾ ಕಾರ್ಮಿಕರ ಜೊತೆ ಸಂವಾದ ನಡೆಸಿದ ಸಚಿವರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಡಕಾರ್ಮಿಕರಿಗೆ ಸಹಾಯ ಮಾಡಲೆಂದು ಕಾಂಗ್ರೆಸ್ ಪಕ್ಷ 20 ವರ್ಷಗಳ ಹಿಂದೆ ತಂದಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರದ ಬಿಜೆಪಿ ಸರಕಾರ ಸತ್ಯನಾಶ ಮಾಡಲು ಹೊರಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಚಗಾಂವ ಗ್ರಾಮದ ಆಶೀರ್ವಾದ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಕ್ಷೇತ್ರ ಭೇಟಿ ಮತ್ತು ಕಾರ್ಮಿಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, 20 ವರ್ಷದ ಹಿಂದೆ ಮಹಿಳೆಯರಿಗೆ, ಬಡವರಿಗೆ, ಕೃಷಿಕರಿಗೆ ಸಹಾಯ ಮಾಡಲೆಂದು ಕಾಂಗ್ರೆಸ್ ಸರಕಾರ ನರೇಗಾ ಯೋಜನೆ ಜಾರಿಗೆ ತಂದಿದೆ. ಆದರೆ ಈಗ ಕೇಂದ್ರ ಸರಕಾರ ಯೋಜನೆಯನ್ನು ಸಂಪೂರ್ಣ ಬದಲಾವಣೆ ಮಾಡಿ ಸತ್ಯನಾಶ ಮಾಡಿದೆ ಎಂದರು.

ಮಹಾತ್ಮಾ ಗಾಂಧಿಯವರ ಹೆಸರನ್ನು ಕೈ ಬಿಡುವ ಜೊತೆಗೆ ಯೋಜನೆಯನ್ನು ಸಂಪೂರ್ಣ ಬದಲಾವಣೆ ಮಾಡಲಾಗಿದೆ. ರಾಜೀವ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಗ್ರಾಮ ಪಂಚಾಯತಿ ವ್ಯವಸ್ಥೆ ಜಾರಿಗೆ ತಂದರು. ನೇರವಾಗಿ ಗ್ರಾಮಕ್ಕೆ ಯೋಜನೆ ತಲುಪಬೇಕು, ಗ್ರಾಮದಲ್ಲೇ ಫಲಾನುಭವಿ ನಿರ್ಧಾರವಾಗಬೇಕು ಎಂದು ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೆ ತಂದರು. ನಂತರ ಮನಮೋಹನ ಸಿಂಗ್  ಅವರು ನರೇಗಾ ಯೋಜನೆ ತರುವ ಮೂಲಕ ಪಂಚಾಯತ ರಾಜ್ ವ್ಯವಸ್ಥೆಗೆ ಬಲ ತುಂಬಿದರು. ಆದರೆ ಇಂದು ಜನರನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಹೊಸ ಹೆಸರನ್ನು ಕೊಟ್ಟು ಯೋಜನೆಯ ಉದ್ದೇಶವನ್ನು ಬುಡಮೇಲು ಮಾಡಿದ್ದಾರೆ. ಇದರ ವಿರುದ್ಧ ರಾಷ್ಟ್ರವ್ಯಾಪಿ ಉದ್ಯೋಗ ಖಾತ್ರಿ ಬಚಾವೋ ಚಳುವಳಿಗೆ ನಿರ್ಧರಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Home add -Advt

ವಿಕೇಂದ್ರೀಕರಣದ ಮೂಲಕ ನಾವು ಗ್ರಾಮ ಪಂಚಾಯತಿಗೆ ಸಂಪೂರ್ಣ ಅಧಿಕಾರ ನೀಡಿದ್ದೆವು. ಆ ಅಧಿಕಾರ ಕಸಿದು ದೆಹಲಿಯಲ್ಲಿ ಕುಳಿತು ನಿರ್ಧಾರ ತೆಗೆದುಕೊಳ್ಳುವ ಹು‌ನ್ನಾರ ಹೊಸ ಯೋಜನೆಯಲ್ಲಿದೆ. ಕೊರೋನಾ ನಂತರವಂತೂ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದರು. ಇಂತಹ ಸಂದರ್ಭದಲ್ಲಿ ನರೇಗಾ ಜನರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಿತ್ತು. ಆದರೆ ಈಗ ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಮಹಾತ್ಮಾ ಗಾಂಧಿಯವರ ಹೆಸರನ್ನು ತೆಗೆದು ರಾಮನ ಹೆಸರಿಟ್ಟಿದ್ದಾರೆನ್ನುವ ಭಾವನೆ ಮೂಡಿಸಲು ಜಿ ರಾಮ್ ಜಿ ಎಂದು ಹೆಸರಿಡಲಾಗಿದೆ. ಇದು ಜವರ ದಿಕ್ಕು ತಪ್ಪಿಸುವ ಹುನ್ನಾರ ಎಂದು ಅವರು ಕಿಡಿಕಾರಿದರು. 

ದೊಡ್ಡ ದೊಡ್ಡ ಉದ್ಯಮಿಗಳ ಕಡೆಗಷ್ಟೆ ಬಿಜೆಪಿಯ ಲಕ್ಷ್ಯ, ಬಡವರಿಗೆ ನೆರವಾಗಬೇನ್ನುವ ಕಳಕಳಿ ಅವರಿಗಿಲ್ಲ. ಈ ದೇಶಕ್ಕೆ ಎಲ್ಲ ದೊಡ್ಡ ಯೋಜನೆಗಳನ್ನೂ ತಂದಿದ್ದು ಕಾಂಗ್ರೆಸ್. ಬಿಜೆಪಿ ಜನರಿಗಾಗಿ ತಂದಿರುವ ಒಂದಾದರೂ ಯೋಜನೆಯ ಹೆಸರು ಹೇಳಲಿ ಎಂದ ಲಕ್ಷ್ಮೀ ಹೆಬ್ಬಾಳಕರ್, ಈ ಹೊಸ ತಿದ್ದುಪಡಿ ವಾಪಸ್ ಪಡೆದು ಹಳೆಯ ನರೇಗಾ ಯೋಜನೆಯನ್ನೇ ಮುಂದುವರಿಸುವ ನಿರ್ಧಾರ ಮಾಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ, ಮಧುರಾ ತೆರಸೆ, ಬಾಲಕೃಷ್ಣ ತೆರೆಸೆ, ಯದು ಕಾಂಬಳೆ, ಅನಸೂಯಾ ಕೋಲಕಾರ, ರೂಪಾ ಗೊಂದಳಿ, ಭಾರತಿ ಜಾಧವ, ಯೋಗಿತಾ ದೇಸಾಯಿ, ಸ್ಮಿತಾ ಖಂಡೇಕರ,

ಎಲ್.ಡಿ.ಚೌಗುಲೆ, ಪಿಡಿಒ ಶಿವಾಜಿ, ಶಶಿಕಾಂತ ಜಾಧವ, ತಾಲೂಕಾ ಪಂಚಾಯತ ಸಿಬ್ಬಂದಿ, ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ನರೇಗಾ ಕೆಲಸಗಾರರು ಇದ್ದರು.

Related Articles

Back to top button