ರಾಜ್ಯದಲ್ಲಿ ಮಳೆಯ ರುದ್ರನರ್ತನ; ಬಿಜೆಪಿಯದ್ದು ಮೋಜಿನ ನರ್ತನ; BJP ಭ್ರಷ್ಟೋತ್ಸವದ ಮುಂದೆ ಕಳೆದುಹೋದ ಮನವೀಯತೆ -ಕಾಂಗ್ರೆಸ್ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟಕ್ಕೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹವುಂಟಾಗಿದ್ದು, ಕಳೆದ ಎರಡು ವಾರಗಳಿಂದ ನಿರಂತರ ಮಳೆಗೆ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗೆ ಸಂದಿಸುವ ಬದಲು ರಾಜ್ಯ ಬಿಜೆಪಿ ಸರ್ಕಾರ ಸಮಾವೇಶದಲ್ಲಿ ತೊಡಗಿ, ವೇದಿಕಯಲ್ಲಿ ಸಚಿವರು, ಶಾಸಕರು ಕುಣಿದು ಕುಪ್ಪಳಿಸಿದ್ದು ವಿಪಕ್ಷ ಕಾಂಗ್ರೆಸ್ ಹಾಗೂ ಜನಾಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಮಳೆಯ ರುದ್ರನರ್ತನ, ಸಂತ್ರಸ್ತರ ನೋವಿನ ರೋಧನೆ, ಬಿಜೆಪಿಯದ್ದು ಮೋಜಿನ ನರ್ತನ. ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ! ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ ರಾಜ್ಯ ಬಿಜೆಪಿ ಸರ್ಕಾರ. ಇದು ಲಜ್ಜೆಗೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.
ಯಾವ ಕಾರಣಕ್ಕಾಗಿ ಈ ಸಂತೋಷ, ಸಡಗರ, ಸಂಭ್ರಮ? ಅತಿವೃಷ್ಟಿಯಲ್ಲಿ ಜನರ ಬದುಕು ಮುಳುಗಿರುವುದಕ್ಕಾ? ಆತ್ಮಹತ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನ ಪಡೆದಿರುವುದಕ್ಕಾ?ಸರ್ಕಾರಿ ಹುದ್ದೆಗಳು ಲಾಭದಾಯಕವಾಗಿ ಸೇಲ್ ಆಗಿರುವುದಕ್ಕಾ? 40% ಕಮಿಷನ್ ಲೂಟಿಯನ್ನು ಯಶಸ್ವಿಯಾಗಿ ಮಾಡುತ್ತಿರುವುದಕ್ಕಾ? ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ, ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ರಾಜ್ಯ ಬಿಜೆಪಿಗೆ ಕನಿಷ್ಠ ಅಂತಃಕರಣವಿಲ್ಲ.ಬಿಜೆಪಿ ಭ್ರಷ್ಟೋತ್ಸವದ ಮುಂದೆ ಮಾನವೀಯತೆ ಕಳೆದುಹೋಗಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.
ಸಂಪುಟ ಸಚಿವರ ಸಾವಿನ ಮೂರು ದಿನದ ಶೋಕಾಚಾರಣೆ ಇನ್ನೂ ಮುಗಿದಿಲ್ಲ. ತಮ್ಮದೇ ಸಹೋದ್ಯೋಗಿಯ ಸಾವು ಬಿಜೆಪಿಯ ಸಚಿವರಿಗೆ ನೋವು ತರಿಸಿಲ್ಲ. ಶೋಕಾಚಾರಣೆ ಘೋಷಿಸಿ ಸಂಭ್ರಮಾಚರಣೆ ಮಾಡುತ್ತಿರುವುದು ನೈತಿಕ ಅದಃಪತನಕ್ಕೆ ಸಾಕ್ಷಿ. ಜನರ ಬಗ್ಗೆ ಇರಲಿ, ಕನಿಷ್ಠ ಸಚಿವರ ಬಗ್ಗೆಯೂ ‘ಸ್ಪಂದನೆ’ ಇಲ್ಲದಾಗಿದೆ.
40% ಕಮಿಷನ್ ಹಣದಲ್ಲಿ ನಡೆಯುತ್ತಿರುವ #BJPBrashtotsava ಕ್ಕೆ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ಸಮಾವೇಶದ ವೇದಿಕೆ ಅಲಂಕಾರದ ಖರ್ಚಿನಲ್ಲಿ ಮೃತ ಅಂಕಿತಾಳಿಗೆ ಪರಿಹಾರ ನೀಡಬಹುದಿತ್ತು. ಹಾಡು, ನೃತ್ಯಗಳ ಖರ್ಚಿನಲ್ಲಿ ಬೆಂಗಳೂರಿನ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬಹುದಿತ್ತು. ರಸ್ತೆ ಗುಂಡಿಗೆ ಬಲಿಯದವರಿಗೆ ಪರಿಹಾರ ನೀಡಬಹುದಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ.
ಬಿಜೆಪಿ ಹೇಳಿದ್ದು – ಗೋರಕ್ಷಣೆ, ಮಾಡಿದ್ದು – ಗೋವಿನ ಹೆಸರಲ್ಲಿ ಕಮಿಷನ್ ಭಕ್ಷಣೆ. ಸರ್ಕಾರ ಗೋಶಾಲೆಗಳನ್ನು ನಿರ್ಮಿಸುವುದು ದೂರದ ಮಾತು ಕನಿಷ್ಠ ಗೋವುಗಳಿಗೆ ನ್ಯಾಯಯುತವಾಗಿ ಮೇವನ್ನೂ ಕೊಡಲಿಲ್ಲ. ಮೇವು ಪೂರೈಕೆದಾರರ ಹಣ ಬಿಡುಗಡೆಗೆ 8.5% ಕಮಿಷನ್ ಕೇಳಿದ ಬಿಜೆಪಿಯ ನಡೆ ಗೋಭಕ್ಷಣೆಗಿಂತ ಭಿನ್ನವೇನಲ್ಲ. ಸಚಿವ “ಮನಿ”ರತ್ನರವರ 40% ಕಮಿಷನ್ ಲೂಟಿಗೆ ಯಾವುದೇ ಅಡೆತಡೆ ಇಲ್ಲದಾಗಿದೆ. ತೋಟಗಾರಿಕಾ ಇಲಾಖೆಯ ಹನಿ ನೀರಾವರಿ ಗುತ್ತಿಗೆದಾರರಷ್ಟೇ ಅಲ್ಲ, ಇತರ ಕಾಮಗಾರಿಗಳಲ್ಲೂ ಅಧಿಕಾರಿಗಳಿಗೆ ಕಮಿಷನ್ ಪಡೆಯುವ ಟಾಸ್ಕ್ ನೀಡಿದ್ದು ಸಚಿವ ಮುನಿರತ್ನರ ಸಾಧನೆ. ಈ ಸಾಧನೆಗಾಗಿಯೇ #BJPBrashtotsava ನೃತ್ಯ ನಡೆಸುತ್ತಿದ್ದೀರಾ? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಮಳೆಯ ರುದ್ರನರ್ತನೆ,
ಸಂತ್ರಸ್ತರ ನೋವಿನ ರೋಧನೆ,
ಬಿಜೆಪಿಯದ್ದು ಮೋಜಿನ ನರ್ತನೆ.ನೆರೆ ಬಂದಾಗ ಕಾಣೆಯಾಗಿದ್ದ ಸಚಿವರು, ಶಾಸಕರೆಲ್ಲ ದೊಡ್ಡಬಳ್ಳಾಪುರದಲ್ಲಿ ಪತ್ತೆ!
ಅತ್ತ ಜನತೆ ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಇತ್ತ ಸಂಭ್ರಮಾಚರಣೆಯಲ್ಲಿದೆ @BJP4Karnataka ಸರ್ಕಾರ.
ಇದು ಲಜ್ಜೆಗೇಡಿತನದ ಪರಮಾವಧಿ.#BJPBrashtotsava pic.twitter.com/dN0g2avXbV— Karnataka Congress (@INCKarnataka) September 10, 2022
ತಾಕತ್ತಿದ್ರೆ, ಧಮ್ ಇದ್ರೆ ಬಿಜೆಪಿಯನ್ನು ತಡೆಯಿರಿ; ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು
https://pragati.taskdun.com/politics/cm-basavaraj-bommaibjp-janotsava-samaveshadoddaballapura/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ