Latest

*ಬಿಜೆಪಿ, ಜೆಡಿಎಸ್ ವಿಲೀನ ಸಾಧ್ಯತೆ : ಡಿಸಿಎಂ ಡಿ.ಕೆ. ಶಿವಕುಮಾರ್*

*ಶೀಘ್ರ ವಿಲೀನವಾದರೆ ‘ಆಟಕ್ಕೆ ಮೂರು, ಲೆಕ್ಕಕ್ಕೆ ಎರಡು ಪಕ್ಷ’ ಎಂಬ ಗೊಂದಲ ನಿವಾರಣೆ*

*ವಿಲೀನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಾಯುತ್ತಿದ್ದಾರೆ*

*ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು:* “ಕುಮಾರಸ್ವಾಮಿ ಅವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆ ಇದೆ. ವಿಲೀನವಾದರೆ ನಮಗೂ ಒಳ್ಳೆಯದೇ. ನಾವೂ ನೇರವಾಗಿ ಬಿಜೆಪಿ ಜೊತೆ ಹೋರಾಟ ಮಾಡಬಹುದು. ಆಗ ‘ಆಟಕ್ಕೆ ಮೂರು ಪಕ್ಷ, ಲೆಕ್ಕಕ್ಕೆ ಮಾತ್ರ ಎರಡು ಪಕ್ಷ’ ಎಂಬ ಗೊಂದಲ ಇರುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದರು.

Home add -Advt

ಕೆಪಿಸಿಸಿ ಕಚೇರಿಯಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಗೋವಿಂದರಾಜ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಶಿವಕುಮಾರ್ ಅವರು ಗುರುವಾರ ಮಾತನಾಡಿದರು.

“ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಕಾರ್ಪೊರೇಟರ್ ಗೋವಿಂದರಾಜ್ ಹಾಗೂ ಅವರ ಧರ್ಮಪತ್ನಿ ಗೌರಮ್ಮ, ಚಂದ್ರಶೇಖರ್, ಜೆಡಿಎಸ್ ಅಧ್ಯಕ್ಷರಾಗಿದ್ದ ಡೇವಿಡ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸುತ್ತೇನೆ. ಗೋವಿಂದರಾಜು ಅವರು ಕುಟುಂಬ ಸ್ನೇಹಿತರು, ನನಗೆ ಮೊದಲಿನಿಂದಲೂ ಪರಿಚಯಸ್ಥರು. ಅವರು ಜೆಡಿಎಸ್ ಪಕ್ಷ ಸಂಘಟಿಸಿ ಅಭ್ಯರ್ಥಿಯೂ ಆಗಿದ್ದರು. ಆದರೆ ಈಗ ಬಿಜೆಪಿ ಹಾಗೂ ಜೆಡಿಎಸ್ ಮಾಡಿಕೊಂಡಿರುವ ಹೊಂದಾಣಿಕೆ ಒಪ್ಪಿಕೊಳ್ಳಲು ಸಾಧ್ಯವಾಗದೇ ಇಂದು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ” ಎಂದರು.

“ನಮ್ಮದು ಜಾತ್ಯಾತೀತ ಸಿದ್ಧಾಂತ. ಹೀಗಾಗಿ ಜಮೀರ್ ಅಹ್ಮದ್ ಖಾನ್ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಳ್ಳಲು ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಬೇಗ ವಿಲೀನವಾದಷ್ಟೂ ನಮಗೇ ಒಳ್ಳೆಯದು. ಅವರು ಬೇಗ ತೀರ್ಮಾನ ಮಾಡಿದರೆ ನಾವು ನಮ್ಮ ತೀರ್ಮಾನ ಮಾಡಿಕೊಳ್ಳಬಹುದು. ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಆಡುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರೇ ಹೇಳುತ್ತಿದ್ದಾರೆ” ಎಂದರು.

“ಅನೇಕ ಕ್ಷೇತ್ರಗಳಲ್ಲಿ ಬಹಳ ಗೊಂದಲಗಳಿವೆ. ನಮ್ಮ ಭವಿಷ್ಯ ಏನು ಎಂಬ ಪ್ರಶ್ನೆಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅನೇಕರು ಉತ್ಸುಕರಾಗಿದ್ದಾರೆ. ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ 247, ಬೆಂಗಳೂರು ಉತ್ತರದಲ್ಲಿ 199, ಬೆಂಗಳೂರು ದಕ್ಷಿಣದಲ್ಲಿ 129, ಬೆಂಗಳೂರು ಕೇಂದ್ರದಲ್ಲಿ 106, ಬೆಂಗಳೂರು ಪೂರ್ವದಲ್ಲಿ 78 ಅರ್ಜಿಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟು 779 ಟಿಕೆಟ್ ಆಕಾಂಕ್ಷಿಗಳು ನಮ್ಮ ಅರ್ಜಿ ಸ್ವೀಕರಿಸಿದ್ದಾರೆ. ಅರ್ಜಿ ತೆಗೆದುಕೊಂಡವರು ಕೊನೆ ದಿನದವರೆಗೂ ಕಾಯಬೇಡಿ. ಎರಡು ಮೂರು ದಿನಗಳಲ್ಲೇ ಸಲ್ಲಿಕೆ ಮಾಡಿ. ನಾವು ಕೂಡ ಪಕ್ಷದ ಅಭ್ಯರ್ಥಿ ಆಯ್ಕೆಗೆ ವಿಮರ್ಷೆ ಮಾಡಬೇಕಿದೆ. ಕೊನೆ ಘಳಿಗೆಯಲ್ಲಿ ಸಲ್ಲಿಕೆಯಾದರೆ ವಿಮರ್ಷೆ ಮಾಡುವುದು ಕಷ್ಟವಾಗುತ್ತದೆ. ಜ.10ರ ಒಳಗಾಗಿ ಅರ್ಜಿ ಕೊಟ್ಟರೆ ನಾವು ನಮ್ಮ ತಂಡವನ್ನು ಕಳುಹಿಸಿ ವರದಿ ಪಡೆಯಬಹುದು. ಯಾರು ವಾರ್ಡ್ ಗಳಲ್ಲಿ ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಯಾರು ಪಕ್ಷಕ್ಕೆ ನಿಷ್ಠರಾಗಿದ್ದಾರೆ ಎಂದು ಪರಿಶೀಲನೆ ಮಾಡಬಹುದು” ಎಂದು ತಿಳಿಸಿದರು.

“ಬೆಂಗಳೂರು ನಗರದಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸವನ್ನು ಬಿಜೆಪಿ ನಾಯಕರೇ ಸ್ವಾಗತಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ, ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಖಾತಾ ಪರಿವರ್ತನೆ, ಆಸ್ತಿ ದಾಖಲೆಗಳನ್ನು ಸರಿಪಡಿಸುತ್ತಿರುವುದನ್ನು ನೋಡಿದರೆ, ನಮಗೆ ಭವಿಷ್ಯವಿಲ್ಲ ಎಂದು ಬಿಜೆಪಿ ನಾಯಕರೇ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಮೊನ್ನೆ ದಳದವರು ನಾವು ಫ್ರೆಂಡ್ಲಿ ಫೈಟ್ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ದಯವಿಟ್ಟು ಫ್ರೆಂಡ್ಲಿ ಫೈಟ್ ಬೇಡ, ನೇರವಾಗಿ ಹೋರಾಟ ಮಾಡಿ. ನೀವು ಒಟ್ಟಾಗಿ ಸೀಟು ಹಂಚಿಕೊಂಡು ಹೋರಾಟ ಮಾಡಿ. ನಿಮ್ಮ ಫ್ರೆಂಡ್ಲಿ ಫೈಟ್ ನಿಂದ ನಿಮ್ಮ ಕಾರ್ಯಕರ್ತರಿಗೆ ಗೊಂದಲವಾಗುತ್ತದೆ. ನೇರವಾಗಿ ಹೋರಾಟ ಮಾಡಲು ನಾವು ಸಿದ್ಧವಿದ್ದೇವೆ” ಎಂದು ಸವಾಲು ಹಾಕಿದರು.

“ಬೆಂಗಳೂರಿನ ಆಡಳಿತ ಸರಿಪಡಿಸಲು ಐದು ಪಾಲಿಕೆಯಾಗಿ ವಿಂಗಡಿಸಿರುವ ನಮ್ಮ ತೀರ್ಮಾನವನ್ನು ಇಡೀ ದೇಶ ನೋಡುತ್ತಿದೆ. ಚಾಮರಾಜಪೇಟೆ, ಬಹಳ ಇತಿಹಾಸವಿರುವ ಕ್ಷೇತ್ರ. ನಾವು ಎಲ್ಲರನ್ನು ಸಮಾನವಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಇನ್ನು ಅನೇಕ ಕ್ಷೇತ್ರಗಳಲ್ಲಿ ಪಕ್ಷ ಸೇರ್ಪಡೆಯಾಗಲು ಬಯಸಿರುವವರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ಆದಷ್ಟು ಬೇಗ ಪಾಲಿಕೆ ಚುನಾವಣೆ ಒಳಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ತಡವಾಗಿ ಬಂದರೆ ತೀರ್ಮಾನ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಆದಷ್ಟು ಬೇಗ ತೀರ್ಮಾನ ಮಾಡಿ” ಎಂದರು.

“ರಾಜಕಾರಣದಲ್ಲಿ ಗೆಲುವು ಸೋಲು ಇದ್ದೇ ಇರುತ್ತದೆ. ಆದರೆ ನಾವು ಗೆಲ್ಲುತ್ತೀವೋ, ಸೋಲುತ್ತೀವೋ. ಆದರೆ ಪಾಲಿಕೆ ಚುನಾವಣೆ ಮಾಡುವ ಬಗ್ಗೆ ಸರ್ಕಾರ ಈಗಾಗಲೇ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದೆ. ಇದರ ಜೊತೆಗೆ ಈ ವರ್ಷವನ್ನು ಚುನಾವಣಾ ವರ್ಷ ಎಂದು ಪರಿಗಣಿಸಲಾಗಿದ್ದು, ಈ ವರ್ಷವೇ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು. ಈ ಬಗ್ಗೆ ಸಿಎಂ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆ ಚರ್ಚಿಸಿ ಇರುವ ಕಾನೂನು ಅಡೆತಡೆ ನಿವಾರಣೆಗೆ ತೀರ್ಮಾನಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಬೇಕು” ಎಂದು ತಿಳಿಸಿದ್ದಾರೆ.

“ಪಕ್ಷಕ್ಕೆ ಬರುವುದು, ವಾಪಸ್ ಹೋಗುವುದು ಮಾಡಬೇಡಿ. ಜೆಡಿಎಸ್ ಪಕ್ಷವನ್ನು ಅವರು ತಮ್ಮ ವೈಯಕ್ತಿಕ ಆಸ್ತಿಯಂತೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಒಂದು ಸಿದ್ಧಾಂತ, ನೀತಿ ಇಲ್ಲ. ನೀವು ಬಂದ ಮೇಲೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ, ಜನರ ಸೇವೆ ಮಾಡಿ. ನಿಮ್ಮ ಸರ್ಕಾರ ಆಡಳಿತದಲ್ಲಿದ್ದು, ಇದನ್ನು ಉಪಯೋಗಿಸಿಕೊಳ್ಳಿ” ಎಂದು ತಿಳಿಸಿದರು.

Related Articles

Back to top button