ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬರನ್ನು ಕೂಡಿ ಹಾಕಿ ಲೈಂಗಿಕ ಕಿರುಕುಳ, ಚಿತ್ರಹಿಂಸೆ ನೀಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಬೆಳಗಾವಿ ಬಿಜೆಪಿ ಮುಖಂಡರೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ಖಡೆಬಜಾರ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮುಖಂಡ ಎನ್ನಲಾದ ಪೃಥ್ವಿ ಸಿಂಗ್ ಹಾಗೂ ಆತನ ಮಗ ಜಸ್ವೀರ್ ಸಿಂಗ್ ವಿರುದ್ಧ ಕೇಸ್ ದಾಖಲಾಗಿದೆ. ಮಹಿಳೆಯೊಬ್ಬರು ಪೃಥ್ವಿ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಲೈಂಗಿಕ ಕಿರುಕುಳ ಆರೋಪ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಮಹಿಳೆ ಇದೀಗ ಉಲ್ಟಾ ಹೊಡೆದಿದ್ದು, ಈ ಘಟನೆಗಳಿಗೆಲ್ಲ ಕಾರಣ ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಎಂದಿದ್ದಾಳೆ.
ಪೃಥ್ವಿ ಸಿಂಗ್ ಹಾಗೂ ಆತನ ಮಗ ತನನ್ನು ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡುತ್ತಿದ್ದು, ನನ್ನ ಪತಿ ಹಾಗೂ ಮಾವನ ವಿರುದ್ಧ ಸುಳ್ಳು ಆರೊಪ ಮಾಡಿ ಪ್ರಕರಣ ದಾಖಲಿಸುವಂತೆ ಹಿಂಸಿಸುತ್ತಿದ್ದಾರೆ. ಇದೇ ಉದ್ದೇಶಕ್ಕೆ ನನಗೆ ವಿಷ ಕುಡಿಸಿದ್ದರು. ಬಿಜೆಪಿ ಮುಖಂಡ ಎಂದು ಸುಳ್ಳು ಹೇಳಿಕೊಂಡು ಇಂತಹ ಕೃತ್ಯವೆಸಗುತ್ತಿದ್ದು, ಆತ ಯಾವುದೇ ಮುಖಂಡ ಪಕ್ಷದ ಕಾರ್ಯಕರ್ತನೂ ಅಲ್ಲ ಎಂದು ಮಹಿಳೆ ದೂರಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಖಡೇಬಜಾರ್ ಠಾಣೆಯಲ್ಲಿ ಪೃಥ್ವಿ ಸಿಂಗ್ ಹಾಗೂ ಮಗನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೃಥ್ವಿ ಸಿಂಗ್ ಈ ಹಿಂದೆ ಬೆಳಗಾವಿಯಲ್ಲಿ ವಿಧಾನ ಮಂಡಳದ ಅಧಿವೇಶನ ನಡೆದ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ದೂರು ದಾಖಲಿಸಿ ತೀವ್ರ ವಿವಾದಕ್ಕೊಳಗಾಗಿದ್ದರು. ತಾನು ರಮೇಶ ಜಾರಕಿಹೊಳಿ ಆಪ್ತ ಎಂದು ಹೇಳಿಕೊಂಡಿದ್ದ. ಬಿಜೆಪಿ ರಾಜ್ಯ ಮುಖಂಡರು ಆತನ ಪರ ಪ್ರತಿಭಟಿಸಲು ಹೋಗಿ ಮುಖಭಂಗಕ್ಕೊಳಗಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ