
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಶಾಸಕ ಬಸವರಾಜ ದಡೇಸುಗೂರು ಅವರ ಗುರುತಿನ ಚೀಟಿ ಅಂಟಿಸಿದ್ದ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರ ಗುರುತಿನ ಚೀಟಿ ಇದ್ದ ಕಾರಿನ ಗಾಜನ್ನು ಒಡೆದು ಕೃತ್ಯ ಎಸಗಲಾಗಿದೆ. ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಖದೀಮರು ಕಾರಿನ ಗಾಜು ಒಡೆದು 4 ಲಕ್ಷ ರೂಪಾಯಿ ದೋಚಿದ್ದಾರೆ.
ಇನ್ನು ಈ ಕಾರು ಶಾಸಕರ ಬೆಂಬಲಿಗ ಗೋವಿಂದ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ವರ್ಷಗಳ ಹಿಂದೆ ಶಾಸಕರು ಕಾರನ್ನು ಮಾರಾಟ ಮಾಡಿದ್ದು, ಬೆಂಬಲಿಗ ಗೋವಿಂದ್ ಶಾಸಕರ ಗುರುತಿನ ಚೀಟಿ ಅಂಟಿಸಿಕೊಂಡು ಓಡಾಟ ನಡೆಸಿದ್ದ ಎಂದು ತಿಳಿದುಬಂದಿದೆ.