*ಕಿತ್ತೂರು ಶಾಸಕರಿಗೂ ಬಿಜೆಪಿ ಗಾಳ?* *100 ಕೋಟಿ ರೂ. ಆಫರ್ ಎಂದ ರವಿ ಗಣಿಗ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಆಪರೇಶನ್ ಕಮಲ ಸುದ್ದಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಪ್ರತಿ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿ ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಆರೋಪಿಸಿದ್ದರು. ಅದರ ಬೆನ್ನಿಗೇ ಇದೀಗ ಕಾಂಗ್ರೆಸ್ ಶಾಸಕ ರವಿ ಗಣಿಗ ಬಾಂಬ್ ಸಿಡಿಸಿದ್ದಾರೆ.
50 ಕೋಟಿ ಅಲ್ಲ, 100 ಕೋಟಿ ರೂ. ಆಫರ್ ನೀಡಿ ಬಿಜೆಪಿಯವರು ಕರೆಯುತ್ತಿದ್ದಾರೆ ಎಂದು ರವಿ ಗಣಿಗ ಹೇಳಿದ್ದಾರೆ. ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ ಚಿಕ್ಕಮಗಳೂರು ಶಾಸಕ ತಮ್ಮಯ್ಯ ಸೇರಿದಂತೆ ಹಲವರನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂಡ್ರಿಸುವ ರೀತಿಯಲ್ಲಿ ಆಫರ್ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿವೆ. ಯಾರು, ಎಲ್ಲಿ, ಎಷ್ಟಕ್ಕೆ ಆಫರ್ ನೀಡಿದ್ದಾರೆ ಎನ್ನುವ ಎಲ್ಲ ಮಾಹಿತಿ, ದಾಖಲೆ ನಮ್ಮ ಬಳಿ ಇದೆ ಎಂದು ಗಣಿಗ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ, ನನಗೆ ಬಹಳ ಹಿಂದೆ ಆಫರ್ ನೀಡಿದ್ದು ನಿಜ. ಹಣದ ವಿಷಯ ಏನೂ ಬಂದಿರಲಿಲ್ಲ. ನಮ್ಮ ಸರಕಾರ ಭದ್ರವಾಗಿದೆ, ಇಂತಹ ಕೆಲಸಕ್ಕೆ ಕೈ ಹಾಕಬೇಡಿ ಎಂದು ನಾನೂ ಹೇಳಿ ಕಳಿಸಿದ್ದೆ. ಆದರೆ ಈಚೆಗೆ ಯಾರೂ ಸಂಪರ್ಕಿಸಿಲ್ಲ. ರವಿ ಗಣಿಗ ಆರೋಪದ ಕುರಿತು ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಚಿಕ್ಕಮಗಳೂರು ಶಾಸಕ ರವಿ ಗಣಿಗ ಸಹ ತಮ್ಮನ್ನು ಬಿಜೆಪಿಯವರು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಗಳೇ ಮಾತನಾಡುತ್ತಾರೆ ಎಂದು ಆಧಾರವಿಲ್ಲದೆ ಮಾತನಾಡಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ. ಅಗತ್ಯವಾದರೆ, ದಾಖಲೆಗಳಿದ್ದರೆ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಒಟ್ಟಾರೆ, ಆಪರೇಶನ್ ಕಮಲದ ವಿಷಯ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಎಲ್ಲಡೆ ಚರ್ಚೆಗೆ ಕಾರಣವಾಗಿದೆ. ಆದರೆ ಬಿಜೆಪಿ ಮಾತ್ರ ಇಂತಹ ಆರೋಪಗಳನ್ನು ತಳ್ಳಿ ಹಾಕಿದ್ದು, ಮುಡಾ ಹಗರಣದಿಂದ ಕಂಗಾಲಾಗಿರುವ ಸಿದ್ದರಾಮಯ್ಯ ವಿಷಯಾಂತರ ಮಾಡಲು ಇಂತಹ ಆರೋಪ ಮಾಡಲಾಗುತ್ತಿದೆ ಎಂದಿದೆ.
 
					 
				 
					 
					 
					 
					
 
					 
					 
					


