*ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಬಿಜೆಪಿ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಗ್ಯಾರಂಟಿ ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಳ ನೀಡುವ ಮೂಲಕ ರಾಜ್ಯ ಸರಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಇದು ಸಂವಿಧಾನ ಬಾಹಿರ ಎಂದು ಆರೋಪಿಸಿ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ , ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಗೋಪಾಲಯ್ಯ, ಸಿ.ಟಿ.ರವಿ ಮೊದಲಾದವರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಡೆ ವಿರುದ್ಧ, ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿಯ ನಿಗಮಗಳ ಹಣ ದುರ್ಬಳಕೆ ಮಾಡುತ್ತಿರುವುದರ ವಿರುದ್ಧ, ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಂಬಳದ ರೂಪದಲ್ಲಿ ನೀಡುತ್ತಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ರಾಜ್ಯಪಾಲರಿಗೂ ದೂರು ನೀಡುವುದಾಗಿ ಆರ್.ಅಶೋಕ ತಿಳಿಸಿದರು.
ಇವರ ಜೊತೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು , ಜೆಡಿಎಸ್ ವಿಧಾನ ಪರಿಷತ್ತಿನ ನಾಯಕರಾದ ಭೋಜೇಗೌಡ ಮತ್ತು ಬಿಜೆಪಿ-ಜೆಡಿಎಸ್‍ನ ಶಾಸಕರುಗಳು ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.