*ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಶಾಸಕ ಸುನೀಲ್ ಕುಮಾರ್ ಮನವಿ* *ಪ್ರಗತಿವಾಹಿನಿಗೆ ಖಚಿತಪಡಿಸಿದ ಮಾಜಿ ಸಚಿವ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಒಂದೆಡೆ ಬಣ ಬಡಿದಾಟ ಜೋರಾಗಿದ್ದರೆ ಮತ್ತೊಂದೆಡೆ ರಾಜ್ಯ ಪ್ರಧಾನಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಿರುವ ಸುನೀಲ್ ಕುಮಾರ್, ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಡುವಂತೆ ಕೋರಿದ್ದಾರೆ.
ತಮ್ಮ ನಿರ್ಧಾರಕ್ಕೆ ಬಣ ಬಡಿದಾಟ ಕಾರಣವಲ್ಲ. ವೈಯಕ್ತಿಕ ಕಾರಣಕ್ಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ಕೋರಿರುವುದಾಗಿ ಸುನೀಲ ಕುಮಾರ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ನೇಮಿಸಲಾಗುತ್ತದೆ. ಸದ್ಯ ಬಿಜೆಪಿಯಲ್ಲಿ ಸುನೀಲ್ ಕುಮಾರ್, ನಂದೀಶ್ ರೆಡ್ಡಿ. ಪ್ರೀತಂ ಗೌಡ ಹಾಗೂ ಪಿ.ರಾಜೀವ್ ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ ತಮ್ಮನ್ನು ಈ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.
ಸಧ್ಯ ಪ್ರಯಾಗದಲ್ಲಿರುವ ಸುನೀಲ ಕುಮಾರ, ತಾವು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ವಿನಂತಿಸಿರುವುದನ್ನು ಖಚಿತಪಡಿಸಿದ್ದಾರೆ. ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಬೆಳವಣಿಗೆಗಳಿಗೂ ತಮ್ಮ ನಿರ್ಧಾರಕ್ಕೂ ಸಂಬಂಧವಿಲ್ಲ. ಬೇರೆ ಬೇರೆ ವಯಕ್ತಿಕ ಕಾರಣಗಳಿಂದಾಗಿ ತಾವು ಈ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾಗಿ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ