ರೊಚ್ಚಿಗೆದ್ದ ಕಾರ್ಯಕರ್ತರಿಂದ ಸೋಮಶೇಖರ್ ಪ್ರತಿಕೃತಿ ದಹನ
ಪ್ರಗತಿವಾಹಿನಿ ಸುದ್ದಿ: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿದರು ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ರೊಚ್ಚಿಗೆದ್ದ ಎರಡೂ ಪಕ್ಷಗಳ ಕಾರ್ಯಕರ್ತರು, ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಪಕ್ಷದಿಂದ ಗೆದ್ದಿದ್ದ ಎಸ್ ಟಿ ಸೋಮಶೇಖರ್ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
25 ಕೋಟಿ ರೂಪಾಯಿ ಪಡೆದ ಎಸ್ ಟಿ ಸೋಮಶೇಖರ್!
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ರಮೇಶ್ ಗೌಡ ಅವರು; ಶಾಸಕ ಎಸ್ ಟಿ ಸೋಮಶೇಖರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ವಿಧಾನಸಭೆ ಸ್ಪೀಕರ್ ಅವರು ಅನರ್ಹಗೊಳಿಸಬೇಕು. ಅಡ್ಡಮತ ಹಾಕಲಿಕ್ಕಾಗಿ ಅವರು ಕಾಂಗ್ರೆಸ್ ನಿಂದ 25 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಒಂದು ವೇಳೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸದಿದ್ದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು. ಅಲ್ಲದೆ, ನಾಳೆಯಿಂದಲೇ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇದೇ ವೇಳೆ ಸಿಟ್ಟಿಗೆದ್ದ ಕಾರ್ಯಕರ್ತರು ಎಸ್ ಟಿ ಸೋಮಶೇಖರ್ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ನಗರ ಜೆಡಿಎಸ್ ಜಿ.ಟಿ.ರೇವಣ್ಣ, ಪರಿಶಿಷ್ಟ ವಿಭಾಗದ ವೇಲು, ಯುವ ಘಟಕದ ಯುವ ಕಾರ್ಯಾಧ್ಯಕ್ಷ ಚಂದ್ರಶೇಖರ್, ಮಾದೇಗೌಡ ಹಾಗೂ ಮತ್ತು ಎಲ್ಲಾ ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ