*ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಶಾಸಕಾಂಗ ಸಭೆ; ವಿರೋಧ ಪಕ್ಷದ ನಾಯಕರಾಗಲಿದ್ದಾರಾ ಆರ್.ಅಶೋಕ್?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ವಿಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರ ಅಭಿಪ್ರಾಯ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿಗೆ ಹೈಕಮಾಂಡ್ ವೀಕ್ಷಕರಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಷ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ ಕುಮಾರ್ ಆಗಮಿಸಿದ್ದಾರೆ. ಹೈಕಮಾಂಡ್ ವೀಕ್ಷಕರನ್ನು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಹಾಗೂ ಪರಿಷತ್ ವಿಪಕ್ಷ ನಾಯಕರ ಬಗ್ಗೆ ಅಭಿಪ್ರಾಯವನ್ನು ಪಡೆಯಲಿದ್ದಾರೆ. ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ ದೆಹಲಿಗೆ ತೆರಳಿ, ಹೈಕಮಾಂಡ್ ಗೆ ಮಾಹಿತಿ ನೀಡಲಿದ್ದಾರೆ. ಬಳಿಕ ದೆಹಲಿಯಲ್ಲಿ ವಿಪಕ್ಷ ನಾಯಕನ ಹೆಸರು ಅಂತಿಮವಾಗಲಿದೆ.
ಮಾಜಿ ಸಚಿವ ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ರಾಜ್ಯಾಧ್ಯಕ್ಷ ಸ್ಥಾನ ಲಿಂಗಾಯಿತ ಸಮುದಾಯಕ್ಕೆ ನೀಡಿರುವುದರಿಂದ ವಿಪಕ್ಷ ನಾಯಕನ ಸ್ಥಾನಕ್ಕೆ ಒಕ್ಕಲಿಗ ನಾಯಕರನ್ನು ಆಯ್ಕೆ ಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಆರ್.ಅಶೋಕ್ ಹೆಸರು ಪ್ರಮುಖವಾಗಿ ಕೇಳಿಬಂದಿದೆ.
ಇನ್ನು ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ