ಪ್ರಗತಿವಾಹಿನಿ ಸುದ್ದಿ; ತುಮಕೂರು: ರಾಜ್ಯ ಮಟ್ಟದಲ್ಲಿ ಹಾಗೂ ಪ್ರತಿ ಜಿಲ್ಲಾ ಮಟ್ಟದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು. ತುಮಕೂರು ಜಿಲ್ಲೆಯ ಜನರ ಆಶೋತ್ತರಗಳು ಹಾಗೂ ಬೇಡಿಕೆಗಳನ್ನು ಪಡೆದು ತುಮಕೂರು ಜಿಲ್ಲೆಗೆ ಒಂದು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತುಮಕೂರಿನ ನಗರ ಅಶೋಕನಗರ ದಲ್ಲಿ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆಯೋಜಿಸಿರುವ “ ವಿಜಯ ಸಂಕಲ್ಪ ಅಭಿಯಾನ”ಕ್ಕೆ ಚಾಲನೆ ನೀಡಿ ಮಾತನಾಡಿದರು.
ತುಮಕೂರಿನ ವಾರ್ಡ್ ನಂ. 26 , ಬೂತ್ ನಂ. 157 ನಲ್ಲಿ ವಿಜಯಸಂಕಲ್ಪ ಅಭಿಯಾನಕ್ಕೆ ಇಂದು ಚಾಲನೆ ನೀಡಿದ್ದೇನೆ. ಈ ಬೂತ್ ನಲ್ಲಿ ಅತಿ ಹೆಚ್ಚು ಸದಸ್ಯರ ಅಭಿಯಾನ ಆಗಬೇಕು. ಮಿಸ್ ಕಾಲನ್ನು ಸಾರ್ವಜನಿಕರಿಗೂ ಮಾಡಿ, ಅವರ ಸದಸ್ಯತ್ವವನ್ನೂ ಪಡೆಯಬೇಕು. ಎರಡು ಮನೆಗೆ ಒಂದು ಸ್ಟಿಕರ್ ನ್ನು ಅಂಟಿಸುವ ಕಾರ್ಯವನ್ನು ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಿಳಿಸುವ ಕೆಲಸವನ್ನು ಬೂತ್ ಮಟ್ಟದ ಪದಾಧಿಕಾರಿಗಳು ಮಾಡಬೇಕು. ಇದು 9 ದಿನದ ಅಭಿಯಾನವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಸುಮಾರು 1 ಲಕ್ಷ ಕಾರ್ಯಕರ್ತರ ನೋಂದಣಿ ಮಿಸ್ ಕಾಲ ಕೊಡುವ ಮುಖಾಂತರ ಮಾಡಬೇಕು ಎಂಬ ುದ್ದೇಶವಿದೆ. ತುಮಕೂರು ಜಿಲ್ಲೆಯ ಪ್ರತಿಯೊಂದು ವಾರ್ಡ್ ನಲ್ಲಿ ಪ್ರತಿಯೊಂದು ಬೂತ್ ನಲ್ಲಿ ಅಭಿಯಾನವಾಗಬೆಕು. ಈ ಅಭಿಯಾನದ ಮೂಲಕ ಸಂಘಟನೆಗೆ ಬಲ ಬರುತ್ತದೆ. ಪಕ್ಷದ ಸದಸ್ಯತ್ವ ವಿಸ್ತಾರವಾಗುತ್ತದೆ ಎಂದರು.
ಪ್ರತಿಯೊಂದು ವಾರ್ಡ್ ನಲ್ಲಿ ವಿಜಯ ಸಂಕಲ್ಪ ಅಭಿಯಾನ :
ಪ್ರತಿಯೊಂದು ವಾರ್ಡ್ ನಲ್ಲಿ ವಿಜಯ ಸಂಕಲ್ಪ ಅಭಿಯಾನ ಪ್ರಾರಂಭಿಸಲಾಗಿದ್ದು, ಪ್ರತಿ ಮಂಡಲದಲ್ಲಿ ಹಾಗೂ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರು ಈ ವಿಜಯ ಸಂಕಲ್ಪ ಅಭಿಯಾನವನ್ನು ಬಿಜಾಪುರದಲ್ಲಿ ಉದ್ಘಾಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ವರಿಷ್ಠ ಅರುಣ್ ಸಿಂಗ್,ಸಚಿವರು, ನಾನೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದರು.
ಮಿಸ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ :
ಜನಸಂಕಲ್ಪ ಯಾತ್ರೆಯನ್ನು ವಿಜಯ ಸಂಕಲ್ಪ ಯಾತ್ರೆಯನ್ನಾಗಿಸಲು ಬೂತ್ ಮಟ್ಟದಲ್ಲಿ ಸಶಕ್ತೀಕರಣವನ್ನು ಮಾಡಲಾಗಿದೆ. ಬೂತ್ ಸಮಿತಿ, ಪೇಜ್ ಸಮಿತಿಗಳ ನಿರ್ಮಾಣ,ಈ ಅಭಿಯಾನದಲ್ಲಿ ಮಿಸ್ ಕಾಲ್ ಕೊಡುವ ಮುಖಾಂತರ ಈಗಾಗಲೇ ಇರುವ ಸದಸ್ಯತ್ವವನ್ನು ನವೀಕರಿಸು ಕೆಲಸವನ್ನು ಮಾಡಬೇಕು. ಬರುವ ಚುನಾವಣೆಯಲ್ಲಿ ಅತ್ಯಂತ ಸಶಕ್ತವಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ವರಿಷ್ಟರು ನೀಡಲಿದ್ದಾರೆ. ನಾಲ್ಕು ದಿಕ್ಕಿನಿಂದಲೂ ರಥಯಾತ್ರೆಯನ್ನು ಆರಂಭಿಸಲಾಗುವುದು. ಪ್ರತಿಯೊಂದು ಕ್ಷೇತ್ರಕ್ಕೂ ನಾಲ್ಕು ರಥಗಳು ಹೋಗುವ ಮೂಲಕ ಜನಜಾಗೃತಿ ತರಲಾಗುವುದು. ಚುನಾವಣೆಯಲ್ಲಿ ಘೋಷಣಾ ಪತ್ರದಲ್ಲಿರುವ ಅಂಶಗಳ ಬಗ್ಗೆ ಜನರಿಂದ ಅಭಿಪ್ರಾಯ ಪಡೆದು ಸಿದ್ಧತೆಯನ್ನು ಮಾಡಿಕೊಳ್ಳಲಾಗುವುದು ಎಂದರು.
ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು:
ಸರ್ಕಾರ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ. 8000 ಶಾಲಾ ಕೊಠಡಿಗಳ ನಿರ್ಮಾಣದ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮುಂದಿನ ಆಗಸ್ಟ್ ಒಳಗೆ ಶೌಚಾಲಯ ನಿರ್ಮಾಣಕ್ಕೆ 250 ಕೋಟಿ ರೂ. ನೀಡಲಾಗಿದೆ. ರೈತರ , ಮೀನುಗಾರರು ,ರೈತ ಕಾರ್ಮಿಕರು. ನೇಕಾರರು, ಆಟೋ, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾ ನಿಧಿ, ಬೀದಿ ಬದಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ 5 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ, ಭೂರಹಿತ ರೈತ ಕೂಲಿಕಾರರಿಗೆ ಮಕ್ಕಳ ಆರೈಕೆಗಾಗಿ 4000 ಅಂಗನವಾಡಿಗಳ ನಿರ್ಮಾಣ ಮಾಡಲಾಗುತ್ತಿದೆ.
ಎಲ್ಲಾ ಸಮಾಜಗಳಿಗೆ ನ್ಯಾಯ :
ಮೀಸಲಾತಿ ಹೆಚ್ಚಳದ ಜೊತೆಗೆ 100 ಅಂಬೇಡ್ಕರ್ ಹಾಸ್ಟೆಲ್ ಹಾಗೂ 50 ಕನಕದಾಸ ಹಾಸ್ಟೆಲ್ ಗಳ ನಿರ್ಮಾಣ, 5 ಮೆಗಾ ಹಾಸ್ಟೆಲ್ ಗಳು, 29 ಸಾವಿರ ಕೋಟಿ ರೂ.ಗಳನ್ನು ಎಸ್ ಸಿ ಎಸ್ ಪಿ –ಟಿ ಎಸ್ ಪಿ ಯೋಜನೆಗಳಿಗೆ ನೀಡಲಾಗಿದೆ. ಎಸ್ ಸಿ ಎಸ್ ಟಿ ಸಮುದಾಯಗಳಿಗೆ 75 ಯೂನಿಟ್ ಉಚಿತ ವಿದ್ಯುತ್ , ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ವಿವೇಕಾನಂದ ಯುವಶಕ್ತಿ ಯೋಜನೆ ಮೂಲಕ ತಲಾ 5 ಲಕ್ಷ ಮಹಿಳೆಯರು ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ನೀಡುವ ಯೋಜನೆಯನ್ನು ಫೆಬ್ರವರಿ ತಿಂಗಳಿನಿಂದ ಪ್ರಾರಂಭಿಸಲಾಗುವುದು. ಪ್ರತಿ ಗ್ರಾಮ ಹಾಗೂ ವಾರ್ಡ್ ನಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ ಉತ್ಪನ್ನಗಳ ತಯಾರಿಗೆ ಆರ್ಥಿಕ ಸಹಾಯ ಹಾಗೂ ಮಾರುಕಟ್ಟೆ ಜೋಡಣೆ ಮಾಡಲಾಗುವುದು. ಎಲ್ಲ ಸಮಾಜಗಳಿಗೆ ನ್ಯಾಯ ಕೊಡುವ ಕೆಲಸವನ್ನು ಮಾಡಲಾಗುತ್ತಿದೆ. ಸಮಾನತೆಯನ್ನು ನೀಡಲಾಗುತ್ತಿದೆ ಎಂದರು.
ತುಮಕೂರಿನಲ್ಲಿ ಕೈಗಾರೀಕರಣ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು :
ನಗರ ಪ್ರದೇಶಗಳ ಅಭಿವೃದ್ಧಿಯಡಿ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿದೆ. 5 ಲಕ್ಷ ಮನೆ ಬಡವರಿಗಾಗಿ ಮನೆ ನೀಡಲಾಗುತ್ತಿದೆ. ಧಾರವಾಡ ಮತ್ತು ತುಮಕೂರು ಜಿಲ್ಲೆಯ ವಿಶೇಷ ಅಧಿಕಾರದಡಿ ಉದ್ಯೋಗ ನೀಡುವ ಯೋಜನೆಯನ್ನು ಜಾರಿಮಾಡಲಾಗುತ್ತಿದೆ. ತುಮಕೂರಿನಲ್ಲಿ ಯುವಕರಿಗೆ ಉದ್ಯೋಗ ನೀಡುವಂತಹ ಕೈಗಾರಿಕೆಗಳಿಗೆ ಎಲ್ಲ ಕ್ಲಿಯರೆನ್ಸ್ ಗಳನ್ನು ನೀಡುವ ಅಧಿಕಾರವನ್ನು ಎಸ್ ಐ ಆರ್ ಹೊಂದಿರುತ್ತದೆ. ತುಮಕೂರಿನಲ್ಲಿ ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ತುಮಕೂರಿನಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಸರ್ಕಾರ ಒತ್ತು ನೀಡುತ್ತಿದೆ ಎಂದರು.
https://pragati.taskdun.com/bjp-mahila-morchatumakurcm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ