
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಅಟ್ಟಹಾಸದ ನಡುವೆಯೇ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಕೊರೊನಾದಿಂದ ಗುಣಮುಖರಾಗುತ್ತಿರುವ ಹಲವರು ಕಪ್ಪು ಶಿಲೀಂದ್ರ ಸೋಂಕಿಗೆ ಬಲಿಯಾಗುತ್ತಿದ್ದಾರೆ.
ರಾಜ್ಯದಲ್ಲಿ 97 ಜನರಲ್ಲಿ ಬ್ಲ್ಯಾಕ್ ಫಂಗಸ್ ಬಂದಿದ್ದು, ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಬದಲಾಗಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ಪ್ರಾಣಾಪಾಯ ಕಟ್ಟಿಟ್ಟಬುತ್ತಿ. ಈ ನಿಟ್ಟಿನಲ್ಲಿ ಬ್ಲ್ಯಾಕ್ ಫಂಗಸ್ ಲಕ್ಷಣ ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಇದೇ ವೇಳೆ ಬ್ಲ್ಯಾಕ್ ಫಂಗಸ್ ಯಾರಲ್ಲಿ ಹೆಚ್ಚಾಗಿ ಕಂಡುಬರತ್ತೆ ಎಂಬ ಬಗ್ಗೆಯೂ ಮಾಹಿತಿ ನೀಡಿದ ಸಚಿವರು, ಕೊರೊನಾ ಸೋಂಕು ಬಂದವರು ಸ್ಟಿರಾಯ್ಡ್ ಬಳಸಿದರೆ ಅಂತವರಲ್ಲಿ ಶುಗರ್ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ ಇಂತವರು ಆರೋಗ್ಯದ ಮೇಲೆ ನಿಗಾವಹಿಸಿ ಶುಗರ್ ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ಮಧುಮೇಹಿಗಳು, ಕ್ಯಾನ್ಸರ್ ಪೇಷಂಟ್ ಗಳು, ಹೆಚ್ ಐವಿ ಸೋಂಕಿತರು, ಅಂಗಾಂಗ ಕಸಿ ಮಾಡಿಸಿಕೊಂಡವರು ಮಾತ್ರವಲ್ಲ ಇತರ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಹೀಗಾಗಿ ಇವರು ಮುಂಜಾಗೃತಾ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ.
ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಬ್ಲ್ಯಾಕ್ ಫಂಗಸ್ ಮೊದಲು ಕಣ್ಣಿಗೆ ಅಟ್ಯಾಕ್ ಆಗುತ್ತದೆ. ಕಣ್ಣಿನಲ್ಲಿ ನೋವು, ಊತಬರುತ್ತದೆ. ಬಳಿಕ ಮೂಗಿಗೆ ನಂತರ ಮೆದುಳಿಗೆ ಅಟ್ಯಾಕ್ ಆಗುತ್ತದೆ. ಹೀಗಾಗಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳವುದು ಸೂಕ್ತ ಎಂದು ಹೇಳಿದ್ದಾರೆ.
ಜನಹಿತದ ಲಾಕ್ ಡೌನ್ ವಿಸ್ತರಿಸಿ




