Kannada News

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಶೂರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮತ್ತು ಕಿತ್ತೂರು ಸಂಸ್ಥಾನದ ಧ್ವಜಾರೋಹಣದ ಮೂಲಕ ಎರಡು ದಿನಗಳ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು, ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಜಾನಪದ ಕಲಾವಾಹಿನಿಗೆ ಚಾಲನೆ ನೀಡಿದರು.

 

ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುಂಚೆ ಪ್ರಾತಃ ಕಾಲ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಪೂಜೆ ನೆರವೇರಿಸಲಾಯಿತು.

ಗ್ರಾಮ ಪಂಚಾಯತಿ ಆವರಣದಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ಗ್ರಾಮದಲ್ಲಿ ಸಂಚರಿಸಿತು. ಸಂಗೊಳ್ಳಿ ರಾಯಣ್ಣನ‌ ಭಾವಚಿತ್ರದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಗ್ಗಲಗಿ ಮೇಳ, ಗೊಂಬೆ ಕುಣಿತ ಮತ್ತಿತರ ಕಲಾ ತಂಡಗಳು ಜನಾಕರ್ಷಿಸಿದವು. ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಕಲಾವಾಹಿನಿಯ ಜತೆಗೆ ಹೆಜ್ಜೆ ಹಾಕಿದರು.

ಜಗ್ಗಲಗಿ ಮೇಳ, ಗೊಂಬೆ ಕುಣಿತ, ಜಾಂಝ್, ಮರಗಾಲ ಕುಣಿತ, ಚಿಟ್ಟೆ ಮೇಳ, ಕೀಲು ಕುದುರೆ ಕುಣಿತ, ಪೂಜಾಕುಣಿತ, ಪಾಳೆಗಾರ ವೇಷ, ಮಹಿಳಾ ಡೊಳ್ಳುಕುಣಿತ ಸೇರಿದಂತೆ ವಿವಿಧ ತಂಡಗಳ‌ ನೂರಾರು ಕಲಾವಿದರು ಪಾಲ್ಗೊಂಡಿದ್ದರು.

ವಸ್ತುಪ್ರದರ್ಶನ ಮೇಳಕ್ಕೆ ಚಾಲನೆ:

ಬಳಿಕ ವಸ್ತುಪ್ರದರ್ಶನ ಮೇಳವನ್ನು ಶಾಸಕ ಮಹಾಂತೇಶ ಕೌಜಲಗಿ ಅವರು ಉದ್ಘಾಟಿಸಿದರು. ವಸ್ತು ಪ್ರದರ್ಶನ ಮೇಳದಲ್ಲಿರುವ ಆರೋಗ್ಯ ಇಲಾಖೆಯ ಮಳಿಗೆಗೆ ಭೇಟಿ ನೀಡಿದ ಶಾಸಕರು, ರಾಷ್ಟ್ರೀಯ ಪಲ್ಸ್ ಪೊಲಿಯೋ ಜಾಗೃತಿ ಕುರಿತ ಕರಪತ್ರಗಳನ್ನು ವೀಕ್ಷಿಸಿದರು. ಆಯುಷ್ಮಾನ್ ಭಾರತ, ಕ್ಷಯರೋಗ ನಿಯಂತ್ರಣ, ಕುಷ್ಠರೋಗ ನಿವಾರಣೆ, ರಕ್ತಹೀನತೆ ನಿವಾರಣೆ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅದೇ ರೀತಿ ರೈತಸಂಪರ್ಕ ಕೇಂದ್ರದ ಮಳಿಗೆ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ವಸ್ತುಪ್ರದರ್ಶನ ಮಳಿಗೆಗಳನ್ನು ಶಾಸಕ ಮಹಾಂತೇಶ ಕೌಜಲಗಿ ವೀಕ್ಷಿಸಿದರು.

ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ದೊಡ್ಡಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button