ಪ್ರಗತಿವಾಹಿನಿ ಸುದ್ದಿ; ಲಕ್ನೋ: ನಿನ್ನೆಯಷ್ಟೇ ಕೊರೊನಾ ವೈರಸ್ ದೃಢಪಟ್ಟಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಇಂದು ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಲಂಡನ್‍ನಿಂದ ಭಾರತಕ್ಕೆ ವಾಸಪ್ ಆಗಿದ್ದ ಕನ್ನಿಕಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದ್ದ ಹಿನ್ನಲೆಯಲ್ಲಿ ಕನ್ನಿಕಾ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಕನ್ನಿಕಾ ಕೊರೊನಾ ದೃಢಪಡುವ ಮೊದಲು ಹಲವು ವಿಐಪಿಗಳನ್ನು ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೋನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಹಜರತ್‍ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿಯೂ ಕನ್ನಿಕಾ ವಿರುದ್ಧ ಇನ್ನೂ ಎರಡು ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪ್ರದೇಶದ ಮೂರು ವಿಭಿನ್ನ ಪಾರ್ಟಿಗಳಲ್ಲಿ ಕನ್ನಿಕಾ ಮಾರ್ಚ್ 11ರಂದು ಲಂಡನ್‍ನಿಂದ ವಾಪಸ್ ಬಂದ ಬಳಿಕ ಭಾಗಿಯಾಗಿದ್ದರು. ಈ ಹಿನ್ನೆಲೆ ಇನ್ನೂ ಅವರ ಮೇಲೆ ಇನ್ನೂ ಎರಡು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಧ್ಯ ಕನ್ನಿಕಾ ಅವರನ್ನು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ