
ಪ್ರಗತಿವಾಹಿನಿ ಸುದ್ದಿ: ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಬಳಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನೊಳಗೆ ಸಂಭವಿಸಿರುವ ಸ್ಫೋಟದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 13ಕ್ಕೆ ಏರಿಕೆ ಆಗಿದೆ.
ಈ ಘಟನೆಯಲ್ಲಿ 29 ಜನ ಗಾಯಗೊಂಡಿದ್ದಾರೆ. ಸ್ಫೋಟದ ವೇಳೆ ಹತ್ತಿರವೇ ಇದ್ದ ಅನೇಕ ವಾಹನಗಳು ಸುಟ್ಟುಹೋಗಿದ್ದು, ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಕಾರಿನಲ್ಲಿ ಸಂಭವಿಸಿದ ಈ ಘಟನೆ ದೆಹಲಿ ಪೊಲೀಸರು, ಎನ್ಐಎ, ಎನ್ಎಸ್ಜಿ ಮತ್ತು ವಿಧಿವಿಜ್ಞಾನ ತಂಡಗಳಿಂದ ಉನ್ನತ ಮಟ್ಟದ ತನಿಖೆಗೆ ಕಾರಣವಾಗಿದೆ.
ಯುಎಪಿಎ ಮತ್ತು ಸ್ಫೋಟಕ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಭದ್ರತಾ ತಪಾಸಣೆಯೊಂದಿಗೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಪ್ರಕರಣದ ಆರೋಪಿಗಳಾದ ಡಾ. ಮುಜಮ್ಮಿಲ್, ಡಾ. ಅದೀಲ್, ಶಾಹೀನ್ ಜಂಟಿಯಾಗಿ ಸುಮಾರು 20 ಲಕ್ಷ ರೂ. ನಗದು ಸಂಗ್ರಹಿಸಿದ್ದು, ಅದನ್ನು ಉಮರ್ಗೆ ಹಸ್ತಾಂತರಿಸಿದ್ದರು ಎಂದು ತಿಳಿದುಬಂದಿದೆ.
ಈ ಹಣದಿಂದ ಆರೋಪಿಗಳು ಗುರುಗ್ರಾಮ್, ನುಹ್ ಮತ್ತು ಹತ್ತಿರದ ಪ್ರದೇಶಗಳಿಂದ ಐಇಡಿ ತಯಾರಿಕೆಗಾಗಿ ಉದ್ದೇಶಿಸಲಾದ 3 ಲಕ್ಷ ರೂ. ಮೌಲ್ಯದ 20 ಕ್ವಿಂಟಾಲ್ಗೂ ಹೆಚ್ಚು ಎನ್ಪಿಕೆ ರಸಗೊಬ್ಬರವನ್ನು ಖರೀದಿಸಿದ್ದಾರೆ. ಈ ನಡುವೆ ಉಮರ್ ಮತ್ತು ಡಾ. ಮುಜಮ್ಮಿಲ್ ನಡುವೆ ಹಣಕಾಸು ಕುರಿತು ಮನಸ್ತಾಪವೂ ಇತ್ತು ಎನ್ನಲಾಗಿದೆ. ಬಳಿಕ ಸಿಗ್ನಲ್ ಅಪ್ಲಿಕೇಶನ್ನಲ್ಲಿ ಉಮರ್ 2-4 ಸದಸ್ಯರೊಂದಿಗೆ ಗುಂಪನ್ನು ರಚಿಸಿದ್ದ ಎಂದು ತನಿಖಾ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ.




