ನಮ್ಮ ಭಾವನೆಗಳ ಜೊತೆ ಬೊಮ್ಮಾಯಿ ಚಲ್ಲಾಟ ಆಡುತ್ತಿದ್ದಾರೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತೊಂದು ಪಾದಯಾತ್ರೆ ಘೋಷಣೆ
ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಡಿಸೆಂಬರ್ 19ರೊಳಗೆ ಮೀಸಲಾತಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿಗಳು ನಮಗೆ ಮಾತು ನೀಡಿದ್ದರು. ಆದರೆ ಈಗ ಮಾತು ತಪ್ಪುತ್ತಿರುವ ನೋವು ನಮ್ಮನ್ನು ಕಾಡುತ್ತಿದೆ. ಅವರಿಗೆ ಮತ್ತೊಮ್ಮೆ ನೆನಪಿಸಬೇಕಾಗಿದೆ ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸವದತ್ತಿಯಲ್ಲಿ ಸೋಮವಾರ ಸಂಜೆ ಪಂಚಮಸಾಲಿ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. 19ರೊಳಗೆ ಸಿಹಿ ಸುದ್ದಿ ಕೊಡ್ತೇನೆ ಎಂದು ಅವರ ಮನೆಯ ಡೈನಿಂಗ್ ಹಾಲ್ ನಲ್ಲಿ ಮುಖ್ಯಮಂತ್ರಿಗಳು ಮಾತು ಕೊಟ್ಟಿದ್ದರು. ಇಂದು ಸವದತ್ತಿಯಲ್ಲಿ ವಿಜಯೋತ್ಸವ ಮಾಡಬೇಕೆಂದು ತಯಾರಿ ಮಾಡಿದ್ದೆವು. ಪಂಚಮಸಾಲಿ ಜನರಿಗೆ ಮಾತು ಕೊಟ್ಟು ತಪ್ಪಿದ್ದಕ್ಕಾಗಿಯೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಬೊಮ್ಮಾಯಿ ಹಾಗೆ ಆಗಲ್ಲ ಅಂದುಕೊಂಡಿದ್ದೇವೆ. 4 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಭೇಟಿಯಾದಾಗ ಒಂದು ರೀತಿ, ಕಡಾಡಿ, ಯತ್ನಾಳ್ ಭೇಟಿ ಮಾಡಿದಾಗ ಮತ್ತೊಂದು ರೀತಿ ಮಾತನಾಡುತ್ತಿದ್ದಾರೆ. ಸಿಹಿ ಕೊಡುತ್ತೇವೆ ಎಂದು ನಮ್ಮ ಭಾವನೆಗಳ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂದರು.
ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದಾಗ ಕಣ್ಣೀರು ಹಾಕಿದ್ದರು. ನಾವು ಕರಗಿದ್ದೆವು. ಆದರೆ ಈಗ 5ನೇ ಬಾರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವೇನು ದುಡ್ಡು ಕೇಳುತ್ತಿಲ್ಲ, ಅಧಿಕಾರ ಕೇಳುತ್ತಿಲ್ಲ. ಆದರೂ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ. ಆದರೂ ಯಾರೂ ನಿರಾಶರಾಗಬೇಕಿಲ್ಲ. ನಾವು ಮೀಸಲಾತಿ ಪಡದೇ ತೀರುತ್ತೇವೆ ಂದು ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಪಣ ತೊಡುತ್ತೇವೆ. ಇದೇ 22ರಂದು ಫೈನಲ್ ಇದೆ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪಿದ್ದರಿಂದ ಪಾದಯಾತ್ರೆ ಮಾಡಬೇಕಾಯಿತು. ಈಗ ಬೊಮ್ಮಾಯಿ ಮಾತು ತಪ್ಪಿದ್ದರಿಂದ ಇಲ್ಲಿಂದ, ಈ ಸಮಾವೇಶ ಮುಗಿದ ತಕ್ಷಣ ಪಾದಯಾತ್ರೆ ಆರಂಭಿಸುತ್ತೇನೆ. 22ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ. ಅಷ್ಟರೊಳಗೆ ಮಾಸಲಾತಿ ಘೋಷಿಸಿದರೆ ಬೊಮ್ಮಾಯಿಗೆ ಮುತ್ತಿನ ಹಾರ ಹಾಕೋಣ. ಇಲ್ಲವಾದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ. ಇದೇ ಅಂತಿಮ ಹೋರಾಟ ಎಂದು ಘೋಷಿಸಿದರು.
ಮುಂದೆ ಮಾತನಾಡುವ ಗಣ್ಯರು ಪಾದಯಾತ್ರೆಗೆ ಒಪ್ಪಿಗೆ ನೀಡಬೇಕು ಎಂದು ವಿನಂತಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, 22ರಂದು ವಿಧಾನ ಸೌಧ ಮುತ್ತಿಗೆ ಹಾಕುವುದು ಬರುವುದಿಲ್ಲ. ಅಂದು ವಿಜಯೋತ್ಸವ ಮಾಡುವ ಸಂದರ್ಭ ಬರಲಿದೆ ಎನ್ನುವ ವಿಶ್ವಾಸವಿದೆ. ಸ್ವಾಮಿಗಳ ಹೋರಾಟ ವ್ಯರ್ಥವಾಗುವುದಿಲ್ಲ ಎಂದರು.
ಶಾಸಕ ಅರವಿಂದ ಬೆಲ್ಲದ, ಪಂಚಮಸಾಲಿ ಮೀಸಲಾತಿ ಕೊಡಲು ನಾವು ಬದ್ದರಿದ್ದೇವೆ. ಆದರೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ನಿಲುವೇನು ಎಂದು ಪ್ರಶ್ನಿಸಿದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಮಾಡು ಇಲ್ಲವೇ ಮಡಿ ಹೋರಾಟ. ಆದರೆ ಮಡಿಯುವುದಕ್ಕಿಂತ ಮೊದಲು ಮೀಸಲಾತಿ ಪಡಿ ಎಂದು ಸ್ವಾಮೀಜಿಗಳು ಕರೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದಾರೆ. ಅರವಿಂದ ಬೆಲ್ಲದ ಅವರೇ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದೀರೇನು?
ನಿಮ್ಮ ಕೈಯಲ್ಲಿ ಅಧಿಕಾರವಿದೆ. ನಿಮ್ಮ ಪಕ್ಷದ ಮುಖಂಡರ ನಿಲುವೇನು ಎಂದು ಸವಾಲು ಹಾಕ್ತೀರಾ? ನಾಳೆ ಬೆಳಗ್ಗೆಯೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಂದ ಸ್ಟೇಟ್ ಮೆಂಟ್ ಕೊಡಸ್ತೀನಿ. ನೀವು ನಾಳೆ ಸಂಜೆಯೇ ಮೀಸಲಾತಿ ಘೋಷಣೆ ಮಾಡ್ತೀರೇನು? ಎಂದು ಸವಾಲೆಸೆದರು.
ನೀವು ಗಟ್ಟಿ ಇದ್ದೀರೇನು? ರಾಜಕೀಯ ಮಾಡಬೇಡಿ ಎಂದರೂ ಮಾಡ್ತೀರೇನು? ಎಷ್ಟಂತ ಜೀವ ತಿಂತೀರಿ? ಅಧಿಕಾರದಲ್ಲಿದ್ದವರು ಎಷ್ಟು ಮರಗಸ್ತೀರಿ? ಎಷ್ಟು ಸಂಕಟ ಕೊಡ್ತೀರಿ? ಮತ್ತೆ ಪಾದಯಾತ್ರೆ ಮಾಡಿ ಅಂತೀರೇನು? ನಾವು ರೈತಾಪಿ ವರ್ಗದವರು. ರೈತರನ್ನು ಕಡೆಗಣಿಸಿದವರು ಉದ್ದಾರವಾಗಲ್ಲ. ನಾವು ಯಾರದ್ದೂ ಕಸಿದು ಕೊಡಿ ಎಂದು ಕೇಳುತ್ತಿಲ್ಲ. ನಮಗೆ ಹೊಟ್ಟೆಗೆ ಕಡಿಮೆ ಇಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೇಳುತ್ತಿದ್ದೇವೆ. 90 ಪರ್ಸೆಂಟ್ ಪಡೆದರೂ ಉತ್ತಮ ಉದ್ಯೋಗ ಸಿಗುತ್ತಿಲ್ಲ. 3ನೇ ದರ್ಜೆಯ ಕ್ಲರ್ಕ್ ಆಗಲೂ ಪರದಾಡುವಂತಹ ಸ್ಥಿತಿ ಬಂದಿದೆ. ನಾವು ಒಗ್ಗಟ್ಟಾಗಿದ್ದೇವೆ. ಸಂಘಟಕರಾಗಿದ್ದೇವೆ. ನಮ್ಮ ಸ್ಥಾನ ಮಾನ ಮರ್ಯಾದೆ ನಮಗೂ ಸಿಗುತ್ತದೆ. ಹಾಗಾಗಿಯೇ ಈ ಹೋರಾಟದ ಕರೆ. ಮುಖ್ಯಮಂತ್ರಿಗಳೇ ನಮ್ಮ ಸಹನೆಯ ಕಟ್ಟೆ ಒಡೆಯುತ್ತಿದೆ. ನೀವು ಕರುಣಾಮಯಿ. ಮೃದು ಸ್ವಭಾವದವರು. ಆದರೆ ನಾನು ಹೇಳೇ ಇಲ್ಲ ಎಂದು ಹೇಳಿಕೆ ಕೊಡುವುದು ಎಷ್ಟು ಸರಿ? ರಾಜಕಾರಣ ಮುಖ್ಯ. ಆದರೆ ಅದಕ್ಕಿಂತ ಸಮಾಜ ಮುಖ್ಯ. ರಾಜಕಾರಣ ಒಂದು ಕಡೆ ಇಡೋಣ. ಪಂಚಮಸಾಲಿ ಮೀಸಲಾತಿ ತರೋಣ, ಈಗ ಮೀಸಲಾತಿ ಬರದಿದ್ದರೆ 10 ವರ್ಷಗಳಲ್ಲಿ ಕೆಟ್ಟ ಸ್ಥಿತಿ ಬರಲಿದೆ. ಎಲ್ಲರಿಗೂ ಮೀಸಲಾತಿ ಇದೆ. ನಮಗೆ ಇಲ್ಲ, ಎಂತಹ ಕರ್ಮ ಮಾಡಿ ಬಂದಿದ್ದೇವೆ, ಮೀಸಲಾತಿ ಸಿಗೋವರೆಗೆ ಒಗ್ಗಟ್ಟಾಗಿ ಹೋರಾಟ ಮಾಡೋಣ ಎಂದರು.
ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಪ್ರತಿಯೊಂದು ತಾಲೂಕಿಗೂ ಹಾಸ್ಟೆಲ್ ಗಳಾಗಬೇಕು. ಇದಕ್ಕಾಗಿ ಸಂಕಲ್ಪ ಮಾಡೋಣ ಎಂದರು.
ಮಾಜಿ ಶಾಸಕರೂ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್, ಯಡಿಯೂರಪ್ಪ ಮೀಸಲಾತಿ ಕೊಡುವುದಾಗಿ ಹೇಳಿ ಮಾತು ತಪ್ಪಿ ಖುರ್ಚಿ ಕಳೆದುಕೊಂಡರು. ಈಗ ಬೊಮ್ಮಾಯಿ 4 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ನೀವು ಖರ್ಚಿ ಕಳೆದುಕೊಳ್ಳುವುದು ಗ್ಯಾರಂಟಿ ಎಂದರು.
ಬೆಳಗಾವಿ ಸುವರ್ಣ ವಿಧಾನಸೌಧದ ಅಧಿವೇಶನಕ್ಕೆ ಮೊದಲು ಮೀಸಲಾತಿ ಘೋಷಣೆ ಮಾಡುವುದಾಗಿ ತಮ್ಮ ಮನೆಯಲ್ಲಿ ನಮ್ಮನ್ನು ಕರೆದು ಭರವಸೆ ನೀಡಿದ್ದರು. ಅವರ ಮಾತಿಗೆ ಅವರೇ ಗೌರವ ಕೊಡುತ್ತಿಲ್ಲ. ಮಾತು ಈಡೇರಿಸಿದರೆ ನಿಮಗೆ ಸನ್ಮಾನ. ಇಲ್ಲವಾದಲ್ಲಿ ಅವಮಾನ ಖಚಿತ. ನಾವು ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವುದು ಖಚಿತ. ನಮಗೆ ಗುಂಡು ಹಾಕುವುದಾದರೆ ಹಾಕಿ. ನಾವು ಬ್ರಿಟೀಶರಿಗೂ ಹೆದರಿಲ್ಲ. ನಿಮಗೆ ಹೆದರುತ್ತೇವೇನು? ಎಂದು ಪ್ರಶ್ನಿಸಿದರು.
ಸಚಿವ ಮುರುಗೇಶ ನಿರಾಣಿ ವಿರುದ್ಧ ಏಕವಚನದಲ್ಲಿ ಕಾಶಪ್ಪನವರ್ ಹರಿಹಾಯ್ದರು. ನೀನು ಈಗ ಮಂತ್ರಿಯಾಗಿದ್ದೀಯೆ. ನನ್ನ ಅಪ್ಪನ ಮುಂದೆ ಹೇಗೆ ಬಂದು ನಿಂತಿದ್ದಿ ಎನ್ನುವುದನ್ನು ನೆನಪಿಸಿಕೋ. ಈಗ ನಮ್ಮ ವಿರುದ್ಧ ಮಾತನಾಡುತ್ತಾನೆ. ಮಿಸ್ಟರ್ ಮಂತ್ರಿ, ನೀವು ಮಂತ್ರಿಯೋ ಖಂತ್ರಿಯೋ. ನನಗೆ ಮಾತನಾಡುತ್ತೀಯೋ? 3ನೇ ಪೀಠ ಮಾಡಿ ನಮ್ಮನ್ನು ಮುಗಿಸಲು ಹೊರಟಿದ್ದೀಯೋ? ಇದೇ ಲಾಸ್ಟ್ ಮುಂದೆ ನಮ್ಮ ಸುದ್ದಿ ತೆಗೆದರೆ ನಿಮಮ್ ಮನೆ ಮುಂದೆ ಬರುತ್ತೇವೆ ಎಂದು ಎಚ್ಚರಿಸಿದರು.
ಮೀಸಲಾತಿಗೆ ಹೀಗೆ ಗಡುವು ಕೊಡುತ್ತಾರೆ ಎಂದು ಹೇಳುತ್ತೀಯಾ? ಈ ಸ್ವಾಮಿಗಳಿಂದಲೇ ಮಂತ್ರಿಯಾಗಿದ್ದೀಯೆ ನೆನಪಿಟ್ಟುಕೋ ಎಂದೂ ಛೇಡಿಸಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರಿಂದ ನಾವು ಬೆಂಬಲ ಕೊಡಿಸುತ್ತೇವೆ. ನಿಮ್ಮ ಅಧಿಕಾರವಿದೆ. ಮೀಸಲಾತಿ ಘೋಷಿಸಿ ಎಂದು ಮರು ಸವಾಲು ಹಾಕಿದರು.
ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಡಿ.22ರಂದು ಮೀಸಲಾತಿ ಘೋಷಣೆ ಖಚಿತ. ಕೆಲಸ ಮಾಡಿಸಿಕೊಂಡೇ ನಾನು ಇಲ್ಲಿಗೆ ಬಂದಿದ್ದೇನೆ. ಅಂದು ಮುತ್ತಿಗೆ ಇಲ್ಲ, ವಿಜಯೋತ್ಸವ ಆಗಲಿದೆ. ಇದೇ ನಮ್ಮ ಕೊನೆಯ ಹೋರಾಟವಾಗಲಿದೆ ಎಂದರು.
ಬೊಮ್ಮಾಯಿ ಅವರು ಹಿಂದಿನವರ ಹಾಗೆ ಇಲ್ಲ. ಹಿಂದಿನವರಿಗೆ ಮೀಸಲಾತಿ ಕೊಡುವ ಮನಸ್ಸಿರಲಿಲ್ಲ. ಒಂದು ಮಂತ್ರಿ ಕೊಟ್ಟು ಸುಮ್ಮನಿರಿಸುತ್ತಿದ್ದರು. ಇವರು ಹಾಗಲ್ಲ. ಮೀಸಲಾತಿ ಕೊಟ್ಟೇ ಕೊಡುತ್ತಾರೆ ಎಂದು ಅವರು ಹೇಳಿದರು.
ಉಗ್ರ ಹೋರಾಟವೂ ಬೇಡ. ಕೆಲಸ ಆಗಿದೆ. ಇನ್ನೇನು ಉಗ್ರ ಹೋರಾಟ ಮಾಡುತ್ತೀರಿ? ಇನ್ನು ಮುಂದಿನದನ್ನು ಯೋಚಿಸೋಣ. ಪಂಚಮಸಾಲಿ ಮಠಕ್ಕೆ ನಾವೆಲ್ಲ ಒಂದೊಂದು ಕೋಟಿ ಕೊಡೋಣ, ಸಿಸಿ ಪಾಟೀಲ ಅವರಿಗೆ 5 ಕೋಟಿ ಕೊಡಲು ಹೇಳಿದ್ದೇನೆ ಎಂದರು.
ಮಾಜಿಸಚಿವರಾದ ಬಸನಗೌಡ ಪಾಟೀಲ ಯತ್ನಾಳ, ವಿನಯ ಕುಲಕರ್ಣಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕರೂ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ವಿಜಯಾನಂದ ಕಾಶಪ್ಪನವರ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಾಜಿ ಶಾಸಕ ವಿಶ್ವನಾಥ ಪಾಟೀಲ, ರತ್ನಾ ಮಾಮನಿ, ಪಂಚನಗೌಡ ದ್ಯಾನಗೌಡ, ವಿರೂಪಾಕ್ಷ ಮಾಮನಿ ಮೊದಲಾದವರು ಮಾತನಾಡಿದರು.
Live – https://fb.watch/hw9cqtoH1J/
*ನೇಕಾರರಿಗೆ ಗುಡ್ ನ್ಯೂಸ್: ಸಿಎಂ ಸನ್ಮಾನಿಸಿದ ಬೆಳಗಾವಿ*
https://pragati.taskdun.com/belagavicm-basavaraj-bommai-nekara-samman-yojne/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ