ರವಿ ಕರಣಂ
ಇಂದು ಓದುವ ಅಭ್ಯಾಸ ಕಡಿಮೆಯಾಗಿದೆ, ಪ್ರತಿಯೊಬ್ಬರ ಕೈಯಲ್ಲೂ ನೋಡಿದರೂ ಮೊಬೈಲ್ ಬಂದಿದೆ ಮೊಬೈಲ್ ನಲ್ಲಿ ಚಿತ್ರಗಳನ್ನು ವೀಕ್ಷಿಸುವುದು, ಸಂತೋಷ ಪಡುವುದಷ್ಟೇ ಮುಂದುವರಿದಿದೆ. ಪುಸ್ತಕಗಳ ಕಡೆಗೆ ಯಾರ ಗಮನವೂ ಇಲ್ಲವಾಗಿದೆ. ಕನ್ನಡದಲ್ಲಿ ಒಂದು ಗಾದೆ ಮಾತು ಇದೆ. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬುದು ಈಗ ಮರೆಯಾದಂತಿದೆ. ದೇಶವನ್ನೇನೋ ಸುತ್ತಿ ನೋಡುತ್ತಾರೆ. ಆದರೆ ಕೋಶದ ಕಡೆಗೆ ಯಾರ ಗಮನವೂ ಇಲ್ಲ. ಇಂದು ಗ್ರಂಥಾಲಯಗಳಲ್ಲಿ ಹೋಗಿ ಕುಳಿತುಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಏಕೆಂದರೆ ಓದುವ ಹವ್ಯಾಸದಿಂದ ವಿಮುಖವಾಗಿತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇದು ಅತ್ಯಂತ ಕಳವಳಕಾರಿಯಾದ ಸಂಗತಿಯೂ ಕೂಡ ಆಗಿದೆ.
ಯಾವುದೇ ಒಂದು ನೆಲದ ಭಾಷೆಯು ಉಳಿಯುವುದು ಅದರ ಗ್ರಂಥ ರೂಪದಿಂದ. ಅದು ಅಕ್ಷರಗಳ ರೂಪದಲ್ಲಿ ಪುಸ್ತಕವನ್ನು ಸೇರಿಕೊಂಡಾಗ, ಶಾಶ್ವತವಾಗಿ ಉಳಿಯುತ್ತದೆ. ಇಲ್ಲವಾದರೆ ಭಾಷೆಗೆ ಒಂದು ನೆಲೆ ಸಿಗದೇ ಇದ್ದಲ್ಲೇ ಮುರುಟಿ ಹೋಗುತ್ತದೆ. ಜೊತೆಗೆ ಅದನ್ನು ಪರಿಣಾಮಕಾರಿಯಾಗಿ ಬಳಸುವುದರಿಂದ, ಅದರ ಜೀವಂತಿಕೆಯು ಗುರುತಾಗಿ ಉಳಿಯುತ್ತದೆ. ಇದೀಗ ಅದರ ಬಗ್ಗೆ ಭಾಷಾ ಪಂಡಿತರ ಕಾಳಜಿಯೂ ಅರಣ್ಯ ರೋದನವಾಗಿದೆ. ಸರ್ಕಾರವು ವಿಶ್ವ ಮಟ್ಟದಲ್ಲಿ ವ್ಯಕ್ತಿಯನ್ನು ಸ್ಪರ್ಧಾಳುವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟು, ಇಂಗ್ಲಿಷ್ ಭಾಷೆಯನ್ನು ಕಲಿಸಲು ಮುಂದಾಗಿದೆ. ಅದೇನೋ ಸರಿಯಾದ ಕ್ರಮವೆಂದು ಭಾವಿಸೋಣ. ಆದರೆ ಅದರ ನೆರಳ ಭರಾಟೆಯಲ್ಲಿ ಮಾತೃಭಾಷೆಯ ಕಡೆಗಣನೆ ಎಂದೂ ಆಗಬಾರದು.
ಹಿಂದಿನ ದಶಕವನ್ನೇ ನೋಡಿದರೆ ತುಂಬಾ ಸಂತೋಷವೆನಿಸುತ್ತದೆ. ಕಾರಣ ದಿನ ಪತ್ರಿಕೆಗಳು, ವಾರ, ಪಾಕ್ಷಿಕ,ಮಾಸಿಕ, ತ್ರೈಮಾಸಿಕ, ವಾರ್ಷಿಕ ಪತ್ರಿಕೆಗಳು ಜನರ ಕೈಯಲ್ಲಿರುತ್ತಿದ್ದವು. ಆಗ ಓದುವ ಹವ್ಯಾಸವಿರುತಿತ್ತು. ಕೇವಲ ಸಣ್ಣ ಮೊಬೈಲ್ ಗಳು ಒಳ ಬರುವ, ಹೊರ ಹೋಗುವಂತಹವಿದ್ದವು. ಹಾಗಾಗಿ ಜ್ಞಾನದ ವಾಹಿನಿಯಾಗಿ ಕಾಗದಗಳು ಏಕಸ್ವಾಮ್ಯತೆಯನ್ನು ಮೆರೆದಿದ್ದವು. ಆಗ ಅವುಗಳ ಸರಬರಾಜಿನಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ಲಕ್ಷೋಪಲಕ್ಷ ಓದುಗರು ಹುಡುಕಿಕೊಂಡು ಹೋಗಿ, ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದರು. ಅವುಗಳಲ್ಲೇ ಸ್ಪರ್ಧೆ ಇರುತ್ತಿದ್ದವು. ಹಳೆಯ ದಿನಪತ್ರಿಕೆಗಳನ್ನೇ ಹಿಂದಿಕ್ಕಿ ಪಾರಮ್ಯ ಮೆರೆದ ಪತ್ರಿಕೆಗಳು ಇಂದು ಕಕ್ಕಾ ಬಿಕ್ಕಿಯಾಗಿವೆ. ಮಾರಾಟದ ಸಂಖ್ಯೆ ಗಣನೀಯ ಇಳಿಕೆ ಕಂಡು ಬರುತ್ತಿದೆ. ಮುಂದೊಂದು ದಿನ, ಸಾಲುಗಟ್ಟಿ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ.
ಇದು ಅಂಡ್ರಾಯ್ಡ್ ಮೊಬೈಲ್ ಯುಗ. 2012 ಎಪ್ರಿಲ್ 12 ರಂದು, ವಿಶ್ವಕ್ಕೆ ಬಂದಪ್ಪಳಿಸಿ, ಕ್ರಾಂತಿಯನ್ನು ಮಾಡಿದ್ದು ಇತಿಹಾಸ. ಕೇವಲ ಮುಂದುವರೆದ ದೇಶಗಳಲ್ಲಿ ಮಾತ್ರ ವಿಡಿಯೋ ಮೂಲಕ ಮಾತನಾಡುತಿದ್ದ ಸಂದರ್ಭದಲ್ಲಿ, ನಮ್ಮ ದೇಶ, ಯಾವಾಗ ಈ ಮಟ್ಟಕ್ಕೆ ತಲುಪುತ್ತದೆಯೋ? ಯಾವಾಗ ನಮ್ಮ ದೇಶ ಉದ್ದಾರವಾಗುತ್ತದೆಯೋ? ಎಂದು ಹಳಹಳಿಸಿದ್ದ ದಿನಗಳು ನೆನಪಿಗೆ ಬಂತು. ಈಗ ಯಾಕಾದರೂ ಇಂತಹ ಕಾಲ ಬಂತೋ? ಎಂದು ಹಳಹಳಿಸಬೇಕಾಗಿದೆ. ಕಾರಣ ಮೊಬೈಲ್ ಒಂದರಿಂದಲೇ ಇಡೀ ನಮ್ಮ ಬದುಕೊಂದೇ ಅಲ್ಲ, ಇಡೀ ಭಾರತೀಯ ಬದುಕಿನ ಬೇರುಗಳು ಸಡಿಲಗೊಂಡು, ಹೀನ ಬದುಕಿನ ಖೆಡ್ಡವನ್ನು ಹುಡುಕಿಕೊಂಡು ಹೋಗಿ ಬೀಳುತ್ತಿದ್ದೇವೆ. ಒಂದಲ್ಲ ಎರೆಡಲ್ಲ. ಎಲ್ಲ ಕ್ಷೇತ್ರಗಳು ಮಾಲಿನ್ಯಗೊಂಡು, ಮೃಗೀಯ ಬದುಕನ್ನು ಅಪ್ಪಿಕೊಳ್ಳುತ್ತಿದೆಯೋ ಎಂದೆನಿಸುತ್ತಿದೆ. ನಡೆ-ನುಡಿ, ಆಚಾರ-ವಿಚಾರ, ಪದ್ಧತಿ,ಸಂಪ್ರದಾಯ, ಧಾರ್ಮಿಕ ವಿಧಿ ವಿಧಾನಗಳು,ಹಬ್ಬ-ಹರಿದಿನಗಳು, ಜಾತ್ರೆ, ಉತ್ಸವಗಳೆಲ್ಲ ಈಗ ತೋರಿಕೆಗಾಗಿ ಉಳಿದುಕೊಂಡಿವೆ. ಅವುಗಳ ಮಹತ್ವ, ಉದ್ದೇಶಗಳೆಲ್ಲ ಮಂಗಮಾಯ! ಮೊಬೈಲ್ ಕೊಟ್ಟ ಹೊಡೆತ ನಮ್ಮ ದೇಶವೊಂದನ್ನೇ ಎಂದಲ್ಲ. ಎಲ್ಲ ದೇಶಗಳ ಸಾಂಸ್ಕೃತಿಕ ಬದುಕನ್ನು ಹದ್ದಿನಂತೆ ಕಿತ್ತು ಹಾಕುತ್ತಿದೆ ಎಂದರೆ ನಂಬುತ್ತೀರಾ? ಅದು ಸತ್ಯವೇ!.
ಇನ್ನು ಇಂತಹ ಸಂದರ್ಭಗಳಲ್ಲಿ ಓದುವುದೆಲ್ಲ ಕಡಿಮೆಯಾಗಿ, ವೀಕ್ಷಿಸುವುದೊಂದೇ ಪರಿಪಾಠವಾಗಿ ಬೆಳೆದಿದೆ. ಇನ್ನು ಮುಂದೆ ಸರ್ಕಾರಗಳು ಕಟ್ಟುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ನೀವು ಕೇವಲ ವೃದ್ಧರನ್ನು ಮಾತ್ರ ಕಾಣುತ್ತೀರಿ. ಯುವ ಸಮೂಹ ಹತ್ತಿರ ಸುಳಿಯುವುದೇ ಇಲ್ಲ. ಗ್ರಂಥಾಲಯದ ಪುಸ್ತಕಗಳು ಅನಾಥವಾಗಿ, ಕಡೆಗೆ ಗೆದ್ದಲುಗಳಿಗೆ ಆಹಾರವಾಗುತ್ತವೆ. ಈಗ ಇ-ಪೇಪರ್ ಗಳ ಮುಂದೆ, ಮುದ್ರಣ ಮಾಧ್ಯಮ ಮಂಕಾಗಿ ಹೋಗಿದೆ. ಕಾರಣ ಸಮಯ ಸಿಕ್ಕಾಗಲೆಲ್ಲ, ಕೈಯಲ್ಲೇ ಎಲ್ಲ ವಿಷಯಗಳು ಲಭ್ಯವಾಗುತ್ತವೆ. ಹಾಗಾಗಿ ಇಂದು ಇ-ಪತ್ರಿಕೆಗಳೇ ಅತಿ ಜನಪ್ರಿಯವಾಗಿವೆ.
ಪ್ರತಿ ಕ್ಷಣಕ್ಕೂ ಹೊಸ ಹೊಸ ಸುದ್ದಿಗಳ ನೋಟಿಫಿಕೇಶನ್ ಗಳು ಬರುತ್ತವೆ. ಮನಸ್ಸು ಬಂದಾಗ ಕಣ್ಣು ಹಾಯಿಸುವ ಪರಿಪಾಠ ಬಂದಿದೆ. ಇನ್ನು ಪತ್ರಿಕೆಗಳನ್ನು ಯಾರು ಮೆಚ್ಚಿಕೊಳ್ಳುತ್ತಾರೆ? ಎಂದೇ ಆ ಎಲ್ಲ ಪತ್ರಿಕೆಗಳೂ ಇ-ಪತ್ರಿಕೆ ಆರಂಭಿಸಿವೆ. ಇದು ಇಂದಿನ ಪ್ರಸ್ತುತ ವಿಷಯ!
ಪುಸ್ತಕ ಕೊಂಡುಕೊಳ್ಳುವ ಪರಿಪಾಠ ಕಳೆಯುತ್ತ ಹೊರಟ ಪರಿಣಾಮ, ಕವಿಗಳು, ಲೇಖಕರೆಲ್ಲ ಮೊಬೈಲ್ ಗಳಲ್ಲಿ ತಮ್ಮ ಸಾಹಿತ್ಯ ಕೃಷಿ ಶುರುವಿಟ್ಟುಕೊಂಡಿದ್ದಾರೆ. ಅಬ್ಬರದ ಪ್ರಚಾರವಿರದೇ, ಬಂಡವಾಳವಿರದೇ ತಮ್ಮ ಸಾಹಿತ್ಯ ಬಳಗವನ್ನು ಕಟ್ಟಿ, ಹತ್ತಾರು ಸಾವಿರ ಓದುಗರನ್ನು ಸಂಪಾದಿಸಿಕೊಂಡಿದ್ದಾರೆ. ಪ್ರಚಾರಕ್ಕೆ ಹಣ ಕೊಟ್ಟರೆ, ನಮ್ಮನ್ನು ಲಕ್ಷ ಲಕ್ಷ ಜನರ ಮುಂದೆ ನಿಲ್ಲಿಸುವ ಹಲವು ಅ್ಯಪ್ ಗಳಿವೆ. Facebook, Messager Instagram, twitter,Teligram, WhatsApp, Muuzzer ಗಳಿಗೆ ಮೊರೆ ಹೋದ ಪರಿಣಾಮ ಅತೀ ಶೀಘ್ರದಲ್ಲಿ ಸಾಹಿತ್ಯಾಸಕ್ತರನ್ನು ತಲುಪಿ, ಮೆಚ್ಚುಗೆಗೂ, ಚುಚ್ಚು ಮಾತಿಗೂ ಭಾಜನರಾಗಿದ್ದಾರೆ. ಹೇಳಿದ್ದಿಷ್ಟು. ಕೊಂಡೋದುವ ಓದುಗರ ಸಂಖ್ಯೆ ಕ್ಷೀಣಿಸಿದೆ. ಮುದ್ರಣ ಮಾಧ್ಯಮ ನೆಪಥ್ಯಕ್ಕೆ ಸರಿಯುತ್ತಿದೆ. ಇದು ಉತ್ಪ್ರೇಕ್ಷೆಯಲ್ಲ.
ಕಾಲ ಬಂದಲಾದಂತೆಲ್ಲ ಎಲ್ಲವೂ ಉನ್ನತ ಮಟ್ಟದಲ್ಲಿ ಬದಲಾಗಬೇಕು ನಿಜ. ಆದರೆ ನಮ್ಮತನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವುದು ಬೇಡ. ಆದರೆ ಕೇಳುವವರು ಯಾರು? ಒಂದು ಕಾಲದ ಕವಿಗಳು ಪುಸ್ತಕದ ಮೂಲಕ ಚಿರಾಯುವಾಗಿ ಉಳಿದರು. ಇಂದು ಯಾರು ? ಆಗಿನ ಪೂರ್ತಿ ಓದಿ, ಕಣ್ಮರೆಯಾಗಿ ಬಿಡುತ್ತಾರೆ. ಒಂದು ಪುಸ್ತಕವನ್ನು ಸಾವಿರಾರು, ಲಕ್ಷ ರೂಪಾಯಿ ಖರ್ಚು ಮಾಡಿ ಹೊರ ತಂದಿದ್ದೇ ಆದರೆ, ಅವು ಪುಸ್ತಕಾಲಯಗಳ ಬದಲು ರದ್ದಿ ಗೂಡಂಗಡಿಗೆ ತಲುಪಿ ಬಿಡುತ್ತವೆ.
ನನಗೆ ಇದೊಂದು ಘಟನೆ ನೆನಪಿಗೆ ಬಂತು. ನಿಮಗೆ ಹೇಳಲೇ ಬೇಕು. ಪ್ರಸಿದ್ದ ಹೆಸರಲ್ಲದಿದ್ದರೂ, ತಮ್ಮ ಜೀವಿತದ 75 ವರ್ಷಗಳಲ್ಲಿ 75 ಕಾದಂಬರಿ ರಚಿಸಿದ ಆರ್ಯಂ ಶೇಟ್ ಮಹನೀಯರ ಮನೆಗೆ ಹೋಗುತ್ತಿದ್ದೆ. ಆಕಸ್ಮಿಕವಾಗಿ ನನ್ನ ಮನೆಗೂ ಆಗಮಿಸಿದ್ದರು. ಅವರ ದ್ವಿತೀಯ ಪುತ್ರ. ನನ್ನ ಸ್ನೇಹಿತ. ಸಿರ್ಸಿಯಲ್ಲಿ ಅವರ ಮನೆ. ಅವರ ಮನೆಯ ಮೇಲಿನ ಅಟ್ಟದಲ್ಲಿ ಸಾವಿರಾರು ಪುಸ್ತಕಗಳು ! ಮನೆಗೆ ಬಂದವರಿಗೆಲ್ಲ ಅವನ್ನೇ ಉಡುಗೊರೆಯಾಗಿ ಕೊಡುವ ಸಂಪ್ರದಾಯ ಅವರದು. ಅದರ ಬೆಲೆ 150. ನಾನು ಅದಕ್ಕೆ ಹಣ ಕೊಡಲು ಹೋದಾಗ, ತೆಗೆದುಕೊಳ್ಳಲು ಹಿಂಜರಿದರು. ನಂತರ ನನ್ನ ಮಾತಿಗೆ ಸಮ್ಮತಿಸಿ, ಸ್ವೀಕರಿಸಿದರು. ಹಣ ಕೊಟ್ಟದ್ದು, ಅವರ ಪ್ರತಿಭೆಗೆ ಅಲ್ಲ. ಅದರ ಹಿಂದಿನ ಶ್ರಮಕ್ಕೆ ಅಲ್ಲ. ಖರ್ಚು ಮಾಡಿದ್ದು, ಸ್ವಂತ ದುಡಿಮೆಯ ಹಣದಿಂದ. ಅದು ವೃಥಾ ವ್ಯರ್ಥವಾಗಬಾರದಲ್ಲವೇ ? ಪುಕ್ಕಟೆ ಸಿಕ್ಕಿದ್ದಕ್ಕೆ ಯಾವತ್ತೂ ಬೆಲೆ ಇರುವುದಿಲ್ಲ. ಅದಕ್ಕೊಂದು ಬೆಲೆ ಇರಬೇಕು. ಅಂದಾಗ ಬರೆಹಗಾರನಿಗೂ ಓದುಗನಿಗೂ ಬಾಂಧವ್ಯ ಬೆಳೆಯುತ್ತದೆ. ಗೌರವವೂ ಹೆಚ್ಚಾಗುತ್ತದೆ.
ಇದೀಗ ಓದುವ ಮನಸುಗಳ ಸಂಖ್ಯೆ ಕಡಿಮೆಯಾಗಿ, ಸಮೃದ್ಧ ಭಾಷೆಯ ಅಚ್ಚು ಮಸುಕಾಗಬಾರದೆಂದು, ತಜ್ಞರು, ಭಾಷಾ ಸಮಿತಿಗಳು, ಕವಿ ಶ್ರೇಷ್ಠರು, ಸಮಾಜದ ಗುರು-ಹಿರಿಯರು, ಓದುವ ಹವ್ಯಾಸದಿಂದ ವಿಮುಖರಾಗಿರುವ ದೊಡ್ಡ ಸಮೂಹವನ್ನು ಹೇಗೆ ಮರಳಿ ಕರೆ ತರಬಹುದು? ಎಂದು ಚರ್ಚಿಸಲು ಕಮ್ಮಟವೊಂದನ್ನು ರಚಿಸಲು ಈ ಮೂಲಕ ಕೋರುತ್ತೇನೆ. ಅದರಲ್ಲೂ ತರುಣರು, ಯುವಕರು ಹೆಚ್ಚಾಗಿ ಪಾಲ್ಗೊಳ್ಳಬೇಕು. ಕೇವಲ ಶಾಲಾ-ಕಾಲೇಜುಗಳ ಪುಸ್ತಕಗಳೊಂದೇ ಅಲ್ಲ. ಭಾಷೆಯ ಬೀಜ ಪ್ರಸರಣ ಮಾಡುವ ಸಾಹಿತ್ಯದ ಕಡೆಗೆ ಮುಖ ಮಾಡುವುದು ಮುಖ್ಯವಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳು ಹೇಗೆ ಮುಂದಾಗುತ್ತವೆಯೋ ಕಾದು ನೋಡೋಣ.
ವಿಶೇಷ ಸಂವಾದ : ‘ಹಿಜಾಬ್‌ಗೆ ಜಗತ್ತಿನಾದ್ಯಂತ ವಿರೋಧ ಆದರೆ ಭಾರತದಲ್ಲಿ ಹಿಜಾಬ್‌ಗಾಗಿ ಆಂದೋಲನ !’
https://pragati.taskdun.com/hijab-issueadvacaterachana-naydu/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ