ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವೆಲ್ಲರೂ ಭಾರತೀಯರು ಎಲ್ಲರೂ ಅನ್ಯೋನ್ಯತೆಯಿಂದ ಇರಬೇಕು. ಗಡಿ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಇರುವುದರಿಂದ ಯಾರೂ ಗಲಾಟೆ ಮಾಡದೇ ಶಾಂತಿ ಕಾಪಾಡಬೇಕು ಎಂದು ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಾಧೀಶ ಕೆ.ಎಲ್ ಮಂಜುನಾಥ ಅವರು ಹೇಳಿದ್ದಾರೆ.
ಗಡಿ ವಿವಾದದ ದಾವೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕುರಿತು ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡಿಗರ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಸುವರ್ಣ ಸೌಧ ನಿರ್ಮಾಣವಾದ ಬಳಿಕ ಕಚೇರಿಗಳ ಸ್ಥಳಾಂತರಕ್ಕೆ ಹಿಂದಿನ ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಸಿದ್ದೇನೆ ಎಂದು ಹೇಳಿದರು.
ರೈತರಿಗೆ ಸಾಲಮನ್ನಾ ಮಾಡಿದ ಹಿಂದಿನ ಸರ್ಕಾರಕ್ಕೆ ಯಾವ ರೀತಿಯಲ್ಲಿ ಸಾಲಮನ್ನಾ ಮಾಡಬಹುದು ಎಂದು ಸಲಹೆ ನೀಡಲಾಗಿತ್ತು. ಪ್ರತಿವರ್ಷ ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುವುದರಿಂದ ಹಿಂದಿನ ಸರ್ಕಾರಕ್ಕೆ ಪತ್ರ ಬರೆದು ಪ್ರತಿಯೊಂದು ಹಳ್ಳಿಗಳಿಗೆ ನೀರು ಹೇಗೆ ಪೂರೈಕೆ ಮಾಡಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದೇನೆ ಎಂದು ನ್ಯಾಯಾಧೀಶ ಕೆ.ಎಲ್.ಮಂಜುನಾಥ ಅವರು ತಿಳಿಸಿದರು.
ಗಡಿವಿವಾದ ಬಹುಜನರಿಗೆ ಮಾಹಿತಿ ಇಲ್ಲ:
ಗಡಿ ವಿವಾದ ಎಂದರೆ ಏನು ಎಂಬುದು ಬಹಳಷ್ಟು ಜನರಿಗೆ ಇದುವರೆಗೆ ತಿಳಿದಿಲ್ಲ, ಮಹದಾಯಿ ವಿಚಾರ ಏನು ಎಂಬುವುದು ಸಹ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ ಎಂದು ನ್ಯಾಯಮೂರ್ತಿ ಮಂಜುನಾಥ್ ಅವರು ಅಭಿಪ್ರಾಯಪಟ್ಟರು.
೧೯೫೬ ರಲ್ಲಿ ಮೈಸೂರು ರಾಜ್ಯ ಎಂದು ನಾಮಕರಣವಾದ ಮೇಲೆ ಅನೇಕ ಪ್ರದೇಶಗಳು ಕರ್ನಾಟಕದಲ್ಲಿ ಸೇರಿಕೊಂಡರೆ, ಕೆಲ ಪ್ರದೇಶಗಳು ಅಕ್ಕಪಕ್ಕದ ರಾಜ್ಯಗಳ ಪಾಲಾದವು, ಅದೇ ರೀತಿ ಚಂದಗಡ ಹೊರತುಪಡಿಸಿ ಬೆಳಗಾವಿ ಕರ್ನಾಟಕದ ಮಡಿಲಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಮಹಾರಾಷ್ಟ್ರ ಸರ್ಕಾರ ನಮಗೆ ಅನ್ಯಾಯವಾಗಿದೆ ಎಂದು ೧೯೫೬ ರಲ್ಲಿ ಮನವಿ ಸಲ್ಲಿಸಿದಾಗ ಕರ್ನಾಟಕ ಮಾತ್ರ ಕೇಂದ್ರಕ್ಕೆ ಗಡಿ ಸಮಸ್ಯೆ ಕುರಿತು ವರದಿ ಸಲ್ಲಿಸಿದೆ ಎಂದು ತಿಳಿಸಿದರು.
ಮಹಾಜನ ಆಯೋಗ ಗಡಿ ಪ್ರದೇಶದ ಕುರಿತು ವರದಿಯನ್ನು ೧೯೫೭ ರಲ್ಲಿ ನೀಡಿದಾಗ ಮಹಾರಾಷ್ಟ್ರದವರು ಅದಕ್ಕೆ ಒಪ್ಪಿರಲಿಲ್ಲ. ಕರ್ನಾಟಕದ ಬೀದರ್, ಗುಲಬರ್ಗಾ, ಬಸವಕಲ್ಯಾಣ, ಅಳಂದ, ಕಾರವಾರ, ಹಳಿಯಾಳ, ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ಹೀಗೆ ೮೧೪ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರದವರು ವಾದ ಮಾಡಿದರು ಎಂದು ನ್ಯಾಯಾಧೀಶ ಕೆ.ಎಲ್ ಮಂಜುನಾಥ ಅವರು ತಿಳಿಸಿದರು.
೮೧೪ ಹಳ್ಳಿಗಳು ಎಂದರೆ ೧/೪ ಭಾಗ ಪ್ರದೇಶ ಕರ್ನಾಟಕದಿಂದ ದೂರ ಉಳಿಯುತ್ತದೆ. ಈ ೮೧೪ ಹಳ್ಳಿಗಳನ್ನು ಮಹಾರಾಷ್ಟ್ರ ಕೇಳಿದೆ. ಶೇ ೭೦ ರಷ್ಟು ಒಂದೇ ಭಾಷೆ ಮಾತನಾಡುವ ಜನರಿದ್ದರೆ ಆ ಭಾಷೆಗೆ ಆ ಪ್ರದೇಶ ಸೇರಬೇಕು. ಆದರೆ ಆ ಎಲ್ಲ ಪ್ರದೇಶಗಳಲ್ಲೂ ಕನ್ನಡಿಗರೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ಹೇಳಿದರು.
೧೯೫೬ರ ಮುಂಚೆ ಪಾರ್ಲಿಮೆಂಟ್‌ನಲ್ಲಿ ಚಂದಗಡ ಹೊರತುಪಡಿಸಿ ಉಳಿದೆಲ್ಲಾ ಪ್ರದೇಶಗಳು ಕರ್ನಾಟಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಒಂದು ಸಲ ತಿರಸ್ಕಾರವಾದರೆ ಅದು ತಿರಸ್ಕಾರವೇ ಆಗುತ್ತದೆ. ೧೯೫೦ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದಾಗ ಬೆಳಗಾವಿ ಭಾಗ ಅದರಡಿ ಬರುತ್ತಿತ್ತು ಎಂದು ತಿಳಿಸಿದರು.
ಯಾವುದೇ ಒಂದು ರಾಜ್ಯವನ್ನು ಭಾಷೆ ಮೇಲೆ ಒಡೆಯ ಬಾರದು. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ತೆಲುಗು ಮಾತನಾಡುವವರು ವಾಸಿಸುತ್ತಿದ್ದಾರೆ. ಅದೇ ರೀತಿ ಚಾಮರಾಜನಗರದಲ್ಲಿ ಮಲಯಾಳಂ ಮಾತನಾಡುವ ಜನರು ವಾಸಿಸುತ್ತಾರೆ. ಹಾಗಂತ ಆ ಪ್ರದೇಶಗಳನ್ನು ತಮಿಳುನಾಡು, ಕೇರಳಕ್ಕೆ ಸೇರಿಸಲು ಆಗುವುದಿಲ್ಲ ಎಂದು ನ್ಯಾಯಾಧೀಶ ಕೆ.ಎಲ್.ಮಂಜುನಾಥ ತಿಳಿಸಿದರು.
ನಾವು ಬಂಧುತ್ವವನ್ನು ಸಾಧಿಸಬೇಕು. ೨೦೦೧ರಲ್ಲಿ ಹಾಗೂ ೨೦೧೧ರಲ್ಲಿ ಗಡಿ ಭಾಷೆಯ ಗಣತಿ ಮಾಡಿಸಿದಾಗ ಕನ್ನಡ ಮಾತನಾಡುವ ಜನರೆ ಹೆಚ್ಚಿಗೆ ಇದ್ದಾರೆ. ಬೆಳಗಾವಿಯ ಪ್ರದೇಶದ ಗಡಿ ಭಾಷಾ ಗಣತಿ ಪ್ರಕಾರ ಕೆಲವೇ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಕನ್ನಡಿಗರೇ ಹೆಚ್ಚಿಗೆ ವಾಸಿಸುವ ಜನರಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಯಾರಿಗೆ ಯಾವ ಸ್ಥಾನಮಾನ ಸಿಗಬೇಕು ಅವರಿಗೆ ಆ ಸ್ಥಾನ ನೀಡಲಾಗಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ದ.ರಾ.ಬೇಂದ್ರೆ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂದು ಹೇಳಿದರು.
ನಮ್ಮ ಸರ್ಕಾರ ಹಾಗೂ ನಮ್ಮ ಆಯೋಗ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಬೇಕು ಅದನ್ನು ಖಂಡಿತವಾಗಿಯು ಮಾಡುತ್ತದೆ. ನನ್ನ ಅಧಿಕಾರ ವ್ಯಾಪ್ತಿಯಲ್ಲಿ ನಾನು ಕೆಲಸ ಮಾಡಬೇಕು. ಕೋರ್ಟಿಗೆ ಹೋಗುವ ಅಧಿಕಾರ ಅವರಿಗೆ ಇದೆ. ಆದರೆ ತೀರ್ಮಾನ ಮಾಡುವ ಅಧಿಕಾರ ಅವರಿಗೆ ಇಲ್ಲ ಎಂದು ನ್ಯಾಯಾಧೀಶ ಕೆ.ಎಲ್. ಮಂಜುನಾಥ ತಿಳಿಸಿದರು.
ಇದೇ ವೇಳೆ ಸಭೆಯಲ್ಲಿ ಪಾಲ್ಗೊಂಡಿದ್ದ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅವರು ಮಾತನಾಡಿ, ೨೦೦೫ ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋದಾಗ ಈ ಗಡಿ ಆಯೋಗ ರಚನೆ ಆಗಿದೆ ಎಂದು ಹೇಳಿದರು . ಕರ್ನಾಟ ಗಡಿ ಆಯೋಗದ ಅಧ್ಯಕ್ಷರು ಬೆಂಗಳೂರು ಬಿಟ್ಟು ಬೆಳಗಾವಿಗೆ ಬರಬೇಕು ತಮ್ಮ ಕಚೇರಿಯನ್ನು ಸುವರ್ಣ ವಿಧಾನಸೌದಕ್ಕೆ ಸ್ಥಳಾಂತರ ಮಾಡಬೇಕು ಎಂದು ಕೇಳಿಕೊಂಡರು.
ಮಹಾರಾಷ್ಟ್ರದವರು ಬೆಳಗಾವಿಗೆ ಬಂದು ಗಲಾಟೆ ಮಾಡಿ ಹೋದರೂ ಇಲ್ಲಿ ಯಾರು ಕೇಳವವರು ಇಲ್ಲ; ಹೇಳುವವರೂ ಇಲ್ಲ. ಕರ್ನಾಟಕದಲ್ಲಿ ಮರಾಠಿಗರಿಗೆ ನೀಡುವ ಸೌಲಭ್ಯಗಳನ್ನು ಮಹಾರಾಷ್ಟ್ರದಲ್ಲಿ ಇರುವ ಕನ್ನಡಿಗರಿಗೆ ಶೇ. ೧೦ ರಟ್ಷು ಕೂಡ ನೀಡುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಗಡಿ ರಕ್ಷಣಾ ಆಯೋಗ ಸದಸ್ಯರಾದ ಎಸ್.ಎಂ ಕುಲಕರ್ಣಿ, ನ್ಯಾಯವಾದಿ ಎಂ.ಬಿ. ಜಿರ್ಲಿ, ಜಿಲ್ಲಾಧಿಕಾರಿ ಡಾ.ಎಸ್‌ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಎಸ್. ಎನ್ ಲೋಕೇಶ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ