Kannada NewsKarnataka NewsLatestPolitics

*ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ: ಮಗುವಿನ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ಸಿಬ್ಬಂದಿ, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ ಸಿಎಂ; ನಾಡಿನ ಜನತೆಗೆ ಮಹತ್ವದ ಸಂದೇಶ*

ಪ್ರಗತಿವಾಹಿನಿ ಸುದ್ದಿ: ಕೊಳವೆ ಬಾವಿಯಲ್ಲಿ ಬಿದಿದ್ದ 2 ವರ್ಷದ ಮಗು ಸಾತ್ವಿಕ್ 20 ಗಂಟೆಗಳ ಕಾಲ ಅನ್ನ, ನೀರು, ಗಾಳಿ, ಬೆಳಕಿಲ್ಲದೇ ಸಾವನ್ನೇ ಗೆದ್ದು ಸುರಕ್ಷಿತವಾಗಿ ಹೊರಬಂದಿದ್ದಾನೆ. ಸ್ಥಳೀಯ ಜನರ ಸಹಕಾರದೊಂದಿಗೆ ರಕ್ಷಣಾ ಸಿಬ್ಬಂದಿ ಕೊಳವೆ ಬಾವಿಯಿಂದ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಮಗುವನ್ನು ಹೊರತಂದಿದ್ದಾರೆ. ಕೋಟ್ಯಂತರ ಜನತೆಯ ಪ್ರಾರ್ಥನೆ ಫಲಿಸಿದೆ. ಮಗು ಆರೋಗ್ಯವಾಗಿ ಸುರಕ್ಷಿತವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮಗುವಿನ ರಕ್ಷಣಾ ಕಾರ್ಯಾಚರಣೆ ಯಶಸ್ವಿ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾ ಸಿಬ್ಬಂದಿಗಳು, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ನಾಡಿನ ಜನತೆಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ.

ವಿಜಯಪುರ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೇ ಶ್ರಮಿಸಿದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರ ಕಾರ್ಯದಕ್ಷತೆ ಪ್ರಶಂಸನೀಯ.

ಮಗುವಿನ ಕುಟುಂಬದವರ, ನಾಡಿನ ಕೋಟ್ಯಂತರ ಜನರ ಹರಕೆ-ಹಾರೈಕೆಗಳು ಫಲಿಸಿದೆ. ಸಾವನ್ನೇ ಗೆದ್ದು ಬಂದ ಪುಟ್ಟ ಕಂದಮ್ಮ ಮತ್ತೆ ಪೋಷಕರ ಮಡಿಲು ಸೇರಿದ್ದು ಕಂಡು ಖುಷಿಯಾಯಿತು.

ನೀರು ಬಾರದ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ. ಇಂತಹ ಘಟನೆಗಳು ಕಾಲಕಾಲಕ್ಕೆ ಪುನರಾವರ್ತನೆಯಾಗುತ್ತಿದ್ದರೂ ಜನ ಜಾಗೃತರಾಗದೇ ನಿರ್ಲಕ್ಷ ತೋರಿರುವುದು ಬೇಸರದ ಸಂಗತಿ. ಸಮಾಜ ಈ ಬಗ್ಗೆ ಇನ್ನದರೂ ಎಚ್ಚೆತ್ತುಕೊಳ್ಳಬೇಕು ಎಂದು ಸಂದೇಶ ನೀಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button