Latest

ಬ್ರಹ್ಮಾಕುಮಾರಿ ಮುಖ್ಯ ಆಡಳಿತಾಧಿಕಾರಿಣಿ ದಾದಿ ಹೃದಯಮೋಹಿನಿ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬ್ರಹ್ಮಕುಮಾರಿ ಮುಖ್ಯ ಆಡಳಿತಾಧಿಕಾರಿಣಿಯಾಗಿದ್ದ ದಾದಿ ಹೃದಯಮೋಹಿನಿಯವರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮುಂಬೈನ ಗಾವದೇವಿ ಸೇವಾಕೇಂದ್ರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರು.

ಮಹಾತಪಸ್ವಿನಿ ರಾಜಯೋಗಿನಿ ದಾದಿ ಹೃದಯಮೋಹಿನಿಜಿಯವರು 8 ವರ್ಷದವರಿದ್ದಾಗ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಾಪನೆಯ ಸಮಯದಲ್ಲಿ ಸಂಪರ್ಕಕ್ಕೆ ಬಂದರು. 1928 ರಲ್ಲಿ ಸಿಂಧಪ್ರಾಂತ್ಯದ ಹೈದರಾಬಾದಿನಲ್ಲಿ ಇವರ ಜನ್ಮ ಆಯಿತು. ಇವರ ಲೌಕಿಕ ಹೆಸರು ಶೋಭ. ಓಂ ಮಂಡಳಿಗೆ ಬಂದಾಗ ಪ್ರಜಾಪಿತ ಬ್ರಹ್ಮಾರವರು ‘ಗುಲ್ಜಾರ್’ ಎಂದು ನಾಮಕರಣ ಮಾಡಿದರು. ಶಿವ ಪರಮಾತ್ಮನಿಂದ ಪಡೆದ ಹೆಸರು ಹೃದಯಮೋಹಿನಿ.

ನಂತರ ಅವರು 14 ವರ್ಷಗಳ ಕಾಲ ಆಧ್ಯಾತ್ಮಿಕ ಜ್ಞಾನ ಮತ್ತು ರಾಜಯೋಗದಲ್ಲಿ ಆಳವಾದ ತರಬೇತಿ ಪಡೆದರು. ಇದಾದ ಮೇಲೆ ದಾದೀಜಿಯವರು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಆಂತರಿಕ ಶಾಂತಿ ನೀಡುವ ಅನೇಕ ರಾಜಯೋಗದ ಕೇಂದ್ರಗಳನ್ನು ತೆರೆದರು. ಹೆಸರಿಗೆ ತಕ್ಕಂತೆ ತಮ್ಮ ಅತ್ಯುನ್ನತ ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಸರ್ವರ ಹೃದಯವನ್ನು ಗೆದ್ದರು. ದಾದೀಜಿಯವರು ದೇಶ-ವಿದೇಶಗಳಲ್ಲಿ ಪ್ರಯಾಣಿಸಿ ಅಸಂಖ್ಯಾತ ಆಶೀರ್ವಚನಗಳನ್ನು ನೀಡಿದ್ದರು. ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲ್ಯಾಂಡ್, ಫಿಲಿಫೈನ್ಸ್, ಹಾಂಗ್ಕಾಂಗ್, ಸಿಂಗಾಪುರ, ಮಲೇಶಿಯಾ, ಇಂಡೋನೇಶಿಯಾ, ಶ್ರೀಲಂಕಾ, ಯು.ಎಸ್.ಎ., ಬ್ರಿಜಿಲ್, ಮೆಕ್ಸಿಕೊ, ಕೆನಡಾ, ಯು.ಕೆ., ಜರ್ಮನಿ, ಫ್ರಾನ್ಸ್ಸ್, ಹಾಲೆಂಡ್, ಪೋಲೆಂಡ್, ರಶಿಯಾ, ಆಫ್ರಿಕಾ ಮುಂತಾದ ಅನೇಕ ದೇಶಗಳ ಆಮಂತ್ರಣದ ಮೇರೆಗೆ ದಾದೀಜಿಯವರು ರಾಜಯೋಗ, ಅಧ್ಯಾತ್ಮ, ತತ್ವಶಾಸ್ತ್ರ, ಬದುಕುವ ಕಲೆ ಮುಂತಾದ ವಿಷಯದ ಬಗ್ಗೆ ಹಲವಾರು ಪ್ರವಚನಗಳನ್ನು ನೀಡಿದ್ದರು.

ಅವರು ಮಾಡಿದ ಅಪಾರ ಸೇವೆಗೆ, ವಿಜಯನಗರದ ಕೃಷ್ಣದೇವರಾಯ ವಿಶ್ವ ವಿದ್ಯಾಲಯವು 2019 ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಸನ್ಮಾನಿಸಿದೆ. ಮಾರ್ಚ2021, ರಲ್ಲಿ ನಾರ್ಥ ಒಡೀಸಾ ವಿಶ್ವವಿದ್ಯಾಲಯವು (ಬಾದಿಪಾಡ) ಗೌರವ ಡಾಕ್ಟರೇಟ್ ಪದವಿಯು ನೀಡಿದೆ.

ದಿವ್ಯಗುಣಗಳ ಮೂರ್ತಿಯಾಗಿರುವ ಇವರು, ತಮ್ಮ ಆದರ್ಶ ಜೀವನದ ಮೂಲಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ವಿಧಾನಗಳನ್ನು ಕಲಿಸಿಕೊಡುತ್ತಿದ್ದರು. ಇವರನ್ನು ಶ್ರೇಷ್ಠ ಯೋಗಿನಿ ಎಂದು ಪರಿಗಣಿಸಲಾಗಿದ್ದು, ಮಾನಸಿಕ ಏಕಾಗ್ರತೆ, ಶಾಂತಿ ಹಾಗೂ ಭಾವನಾತ್ಮಕ ಸ್ಥಿರತೆಯನ್ನು ಕಂಡುಕೊಳ್ಳಲು ಇವರನ್ನು ಅಸಂಖ್ಯಾತ ಜನರು ಸಂಪರ್ಕಿಸುತ್ತಿದ್ದರು. ಪ್ರಾಚೀನ ರಾಜಯೋಗದ ಮೂಲಕ ಹೊರಹೊಮ್ಮುವ ಉನ್ನತ ಆಧ್ಯಾತ್ಮಿಕ ತತ್ವಗಳನ್ನು ಜನತೆಗೆ ತಿಳಿಸಲು ಹಾಗೂ ಅದರಂತೆ ನಡೆಯಲು ಬದ್ಧರಾಗಿದ್ದರು. ಅನೇಕ ಕಾರ್ಯ-ಚಟುವಟಿಕೆಗಳ ಮಧ್ಯೆಯೂ ಇವರು ಅಪರಿಮಿತ ಶಾಂತಿಯ ಪ್ರಾಪ್ತಿಯನ್ನು ಹೊಂದಿರುವ ಶಾಂತಿ ದೇವತೆಯಾಗಿದ್ದರು. ದಾದಿ ಹೃದಯಮೋಹಿನಿಯವರಿಗೆ ನವ ಜಗತ್ತಿನ ನಿರ್ಮಾಣ ಕಾರ್ಯದಲ್ಲಿ ಮನುಷ್ಯನ ಪಾತ್ರ ಹಾಗೂ ಸಾಮಥ್ರ್ಯದ ಬಗ್ಗೆ ಅಪಾರ ವಿಶ್ವಾಸವಿತ್ತು. ಸಂಪೂರ್ಣ ಸುಖ, ಶಾಂತಿ, ಆರೋಗ್ಯದಿಂದ ತುಂಬಿರುವ ಶ್ರೇಷ್ಠ ಜಗತ್ತಿನ ಸಾಕ್ಷಾತ್ಕಾರ ಇವರಿಗಾಗಿತ್ತು. ಬ್ರಹ್ಮಾಬಾಬಾರವರು 1969 ರಲ್ಲಿ ಅವ್ಯಕ್ತವಾದ ನಂತರ ನಿರಾಕಾರ ಪರಮಾತ್ಮನ ಸಾಕಾರ ಮಾಧ್ಯಮರಾಗಿ 2018 ತನಕ ಸೇವೆ ಸಲ್ಲಿಸಿದರು. ದಾದೀಜಿಯವರು ಇತ್ತೀಚೆಗೆ ವೈದ್ಯಕೀಯ ಸಲಹೆ ಮೇರೆಗೆ ಮುಂಬೈನ ಗಾವದೇವಿ ಸೇವಾಕೇಂದ್ರದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅವರು ವಯೋಸಹಜ ಕಾಯಿಲೆಯಿಂದ ಇಂದು ಬೆಳ್ಳಗ್ಗೆ 8.40 ಕ್ಕೆ ಅವ್ಯಕ್ತರಾದರು.

ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿದ್ದರು. ದಾದೀಜಿಯವರ ದಿವ್ಯಗುಣಗಳು, ದೂರದೃಷ್ಟಿ ಮತ್ತು ನಮ್ರತೆಯು ಲಕ್ಷಾಂತರ ಸಂಖ್ಯೆಯಲ್ಲಿ ಮನುಷ್ಯರನ್ನು ಸರಳ, ಶಾಂತಿಯುತ ಮತ್ತು ಆಧ್ಯಾತ್ಮಿಕ ಜೀವನವನ್ನು ಪಾಲಿಸಲು ಪ್ರೇರಣೆ ನೀಡಿದೆ.ಅವರಿಗೆ ಈಶ್ವರೀಯ ವಿಶ್ವವಿದ್ಯಾಲಯದ ಸಮಸ್ತ ಪರಿವಾರದಿಂದ ಅನಂತ ನಮನಗಳು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button