Kannada NewsKarnataka NewsLatest
Breaking News – ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಗೊತ್ತೆ?: ಇಲ್ಲಿದೆ ಸಮಗ್ರ ಮಾಹಿತಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ 2023ರ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆಯಲಾಗಿದೆ. ಸ್ವೀಕೃತ ಅರ್ಜಿಗಳನ್ನು ಸಂಬಂಧಿಸಿದ ಜಿಲ್ಲಾ ಅಧ್ಯಕ್ಷರುಗಳಿಗೆ ರವಾನಿಸಲಾಗಿದೆ. ಮುಂದಿನ ಹಂತದ ಪ್ರಕ್ರಿಯೆಗಳು ಕೆಳಗಿನಂತಿರುತ್ತದೆ :
1. ಜಿಲ್ಲಾ ಮಟ್ಟದಲ್ಲಿ ಅರ್ಜಿಗಳನ್ನು ಆಕಾಂಕ್ಷಿಗಳೊಂದಿಗೆ ವಿಚಾರ ವಿನಿಮಯ ಮಾಡಿ, ಸ್ಥಳೀಯವಾಗಿ ಕ್ಷೇತ್ರವಾರು ಮತದಾರರ ಒಲವು ಮತ್ತು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿ, ಪ್ರತೀ ಕ್ಷೇತ್ರಕ್ಕೆ ಸೂಕ್ತವಾದ 1 ರಿಂದ 3 ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಕೆಪಿಸಿಸಿಗೆ ಗೌಪ್ಯವಾಗಿ ತಲುಪಿಸುವ ಸಲುವಾಗಿ ಜಿಲ್ಲೆಯ ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷರ ನೇತೃತ್ವದ ಜಿಲ್ಲಾ ಚುನಾವಣಾ ಸಮಿತಿ ಇರುತ್ತದೆ. ಈ ಸಮಿತಿಯಲ್ಲಿ ಕೆಳಕಾಣಿಸಿದವರು ಸದಸ್ಯರಾಗಿರುತ್ತಾರೆ
• ಏಐಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು
• ನಿಯೋಜಿತ ಪ್ರದೇಶ ಚುನಾವಣಾ ಸಮಿತಿಯ ಸದಸ್ಯರು
• ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು
• 2019ರ ಲೋಕಸಭಾ ಅಭ್ಯರ್ಥಿ (ಆಯಾ ಜಿಲ್ಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ)
• ಕೆ.ಪಿ.ಸಿ.ಸಿ. ಉಸ್ತುವಾರಿ ಉಪಾಧ್ಯಕ್ಷರು.
ಕ್ಷೇತ್ರವಾರು ಸಮಾಲೋಚನಾ ಸಭೆಗಳಲ್ಲಿ ಆಯಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ, ಸಂಯೋಜಕರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು.
• ಜಿಲ್ಲಾ ಉಸ್ತುವಾರಿ ಕೆಪಿಸಿಸಿ ಕಾರ್ಯಾಧ್ಯಕ್ಷರ ವಿವೇಚನೆಯ ಮೇರೆಗೆ ಯಾರಾದರೂ ನಾಯಕರನ್ನು ಬೇಕಾದರೆ ಸೇರಿಸಿಕೊಳ್ಳಬಹುದು.
• ಟಿಕೆಟ್ ಆಕಾಂಕ್ಷಿಗಳು ಅವರು ಬಯಸಿದ ಕ್ಷೇತ್ರದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಸಮಿತಿಯು ಅವರನ್ನು ಪ್ರತ್ಯೇಕವಾಗಿ ಮಾತನಾಡಿಸಿ, ಅವರ ಅಭಿಪ್ರಾಯವನ್ನು ಕೇಳಬೇಕು.
2. ಜಿಲ್ಲಾ ಚುನಾವಣಾ ಸಮಿತಿಯು ಜಿಲ್ಲೆಯ ಮಂಚೂಣಿ ಘಟಕಗಳ, ವಿಭಾಗಗಳ ಮತ್ತು ಸೆಲ್‌ಗಳ ಅಧ್ಯಕ್ಷರುಗಳ ಜೊತೆ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು. ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅವರೆ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕು.
3. ಜಿಲ್ಲಾ ಸಮಿತಿಯವರು ಪ್ರತೀ ವಿಧಾನ ಸಭಾ ಕ್ಷೇತ್ರದ ಅಕಾಂಕ್ಷಿಗಳ ಪೈಕಿ ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧ ಪಡಿಸುವ ಮುನ್ನ ತಳಮಟ್ಟದಿಂದ ಕೂಡಾ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಅದಕ್ಕಾಗಿ, ಪ್ರತೀ ಕ್ಷೇತ್ರದಿಂದ ಮೊದಲು ಕಾರ್ಯಕರ್ತರನ್ನು ಕರೆಸಿ ಮಾತನಾಡಬೇಕು. ನಂತರ ಕ್ಷೇತ್ರದ ನಾಯಕರುಗಳನ್ನು ಕರೆಸಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕು. ಆ ನಂತರ ಕಾರ್ಯಕರ್ತರು ಮತ್ತು ನಾಯಕರ ಸಭೆ ನಡೆಸಬೇಕು. ಪ್ರತೀ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಸಮಯಗಳನ್ನು ನಿಗದಿ ಮಾಡಬೇಕು. ಬ್ಲಾಕ್ ಸಮಿತಿಯ ಅಭಿಪ್ರಾಯವನ್ನು ತಪ್ಪದೇ ಸಂಗ್ರಹಿಸಬೇಕು.
4. ಚುನಾವಣಾ ಸಮಿತಿಯು ಕ್ಷೇತ್ರವಾರು ಸಭೆಗಳನ್ನು ಜಿಲ್ಲಾ ಕಾಂಗ್ರೆಸ್ ಕಛೇರಿ ಅಥವಾ ಸಮುದಾಯ ಭವನದಲ್ಲಿ ನಿಗದಿ ಪಡಿಸಿದ ಸಮಯದಲ್ಲಿ ಜರಗಿಸಬೇಕು. ಯಾರದೇ ಮನೆ ಅಥವಾ ವಯಕ್ತಿಕ ಕಛೇರಿಗಳಲ್ಲಿ ಸಭೆಗಳನ್ನು ನಡೆಸುವಂತಿಲ್ಲ.
5. ಸಭೆಯ ಕಲಾಪಗಳ ಧ್ವನಿ ಮುದ್ರಣ (ರೆಕಾರ್ಡಿಂಗ್), ಅಥವಾ ವಿಡಿಯೋ ರೆಕಾರ್ಡಿಂಗ್ ಗಳನ್ನು ಮಾಡಲು ಯಾವುದೇ ರಿತಿಯಲ್ಲಿ ಅವಕಾಶ ನೀಡಬಾರದು. ಮತ್ತು ಮಾಧ್ಯಮದವರಿಗೆ ಸಭೆಗೆ ಆಹ್ವಾನ ಮಾಡಬಾರದು ಮತ್ತು ಅವರಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಬಾರದು.
6. ಜಿಲ್ಲಾ ಚುನಾವಣಾ ಸಮಿತಿಯು ಚುನಾವಣೆಗಳಲ್ಲಿ ಗೆಲ್ಲುವಂತಹ ಸೂಕ್ತ ಅಭ್ಯರ್ಥಿಗೆ ಆದ್ಯತೆ ನೀಡುವುದರ ಜೊತೆಗೆ ಅವರ ಹಿನ್ನೆಲೆ, ಕ್ಷೇತ್ರದಲ್ಲಿ ಅವರಿಗಿರುವ ಮಾನ್ಯತೆ, ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಅವರು ಹೊಂದಿರುವ ಪ್ರಭಾವ ಹಾಗೂ ಚುನಾವಣೆಯನ್ನು ಎಲ್ಲರ ಸಹಕಾರ ಪಡೆದು ನಿರ್ವಹಿಸಬಲ್ಲ ಸಾಮರ್ಥ್ಯ ಮತ್ತು ಸಂಪನ್ಮೂಲ ಮುಂತಾದ ವಿಷಯಗಳನ್ನು ಕೂಡ ಗಮನದಲ್ಲಿರಿಸಿ ಕೊಳ್ಳಬೇಕು.
7. ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿ, ಸಮಾಜದ ಎಲ್ಲಾ ವರ್ಗಗಳಿಗೆ ಸಮಾನವಾದ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು.
8. ಯಾವುದೇ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗವಹಿಸಿರುವ ಹಾಗೂ ಕೋಮುವಾದವನ್ನು ಪ್ರಚೋದಿಸಿರುವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಮತ್ತು ತತ್ವಗಳ ವಿರುದ್ಧವಾಗಿರುವ ಆಚಾರ ಮತ್ತು ವಿಚಾರವನ್ನು ಪ್ರತಿಪಾದಿಸುವ ಯಾವುದೇ ಆಕಾಂಕ್ಷಿಗೆ ಅವಕಾಶ ನೀಡಬಾರದು.
9. ಜಿಲ್ಲಾ ಚುನಾವಣಾ ಸಮಿತಿಯ ಸಭೆಯಲ್ಲಿ ಯಾವುದೇ ಕಾರಣಕ್ಕೂ ಸಮಿತಿಯ ಸದಸ್ಯರಲ್ಲದವರು ಭಾಗವಹಿಸಲು ಅವಕಾಶವಿರಬಾರದು. ನಿಗದಿತ ನಮೂನೆಯಲ್ಲಿ ಬಂದಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯವರು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಚುನಾವಣಾ ಸಮಿತಿಯ ಸಭೆಗಳ ದಿನಾಂಕ ಮತ್ತು ಸ್ಥಳ ಸಾಕಷ್ಟು ಮುನ್ನವೇ ಸಂಬಂಧಪಟ್ಟ ಎಲ್ಲರಿಗೂ ತಿಳಿಸಿ, ಎಲ್ಲರೂ ಭಾಗವಹಿಸುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಕೆಲವರು ಮಾತ್ರ ಸೇರಿ ತಮಗೆ ಬೇಕಾದ ಕಡೆ ಸಭೆ ನಡೆಸಿ ತೆಗೆದುಕೊಳ್ಳಲಾಗಿದೆ ಎಂಬ ಭಾವನೆ ಬರುವಂತೆ ಖಂಡಿತವಾಗಿಯೂ ಮಾಡಬಾರದು.
10. ಜಿಲ್ಲಾ ಆಯ್ಕೆ ಸಮಿತಿಯು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಪರಸ್ಪರ ಸಮಾಲೋಚನೆಯೊಂದಿಗೆ ಸರ್ವಾನುಮತದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಸೂಕ್ತ ಅಭ್ಯರ್ಥಿ ಎಂದೆನಿಸಿದವರ ಪಟ್ಟಿಯನ್ನು ಪ್ರತಿ ಕ್ಷೇತ್ರಕ್ಕಾಗಿ ಸಿದ್ಧಪಡಿಸಬೇಕು. ಆಯಾ ಕ್ಷೇತ್ರದ ರಾಜಕೀಯ ಪರಿಸ್ಥಿತಿ ಮತ್ತು ಹಿನ್ನೆಲೆಯ ಜೊತೆಗೆ ಸೂಕ್ತ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಬಗ್ಗೆ ಟಿಪ್ಪಣಿಯನ್ನು ಜೊತೆಯಲ್ಲಿ ಸೇರಿಸಿ ಕೆ.ಪಿ.ಸಿ.ಸಿ. ಗೆ ಕಳುಹಿಸಬೇಕು. ಪ್ರತಿ ಅಭ್ಯರ್ಥಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ನಮೂದಿಸಬೇಕು.
11. ಸ್ಥಳೀಯ ಮಟ್ಟದಲ್ಲಿ ಜನರ ವಿಶ್ವಾಸ ಮತ್ತು ಅಭಿಮಾನ ಗಳಿಸಿರುವ ಹಾಗೂ ಆಯಾ ಕ್ಷೇತ್ರಗಳಲ್ಲಿ ಸೇವಾನಿರತರಾಗಿರುವವರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು. ಯುವಕರು ಮತ್ತು ಮಹಿಳಾ ಮುಖಂಡರು ಗೆಲ್ಲುವ ಸಾಧ್ಯತೆ ಇರುವಲ್ಲಿ ಅವರಿಗೆ ಪ್ರಾಮುಖ್ಯತೆ ನೀಡಬೇಕು. ಸ್ಥಳೀಯ ಕಾರ್ಯಕರ್ತರ ಸಹಕಾರವನ್ನು ಪಡೆದು ಗೆಲ್ಲುವಂತಹ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ ನೀಡತಕ್ಕದ್ದು. ಪಕ್ಷದಲ್ಲಿ ಸೇವಾಹಿರಿತನ, ಅಗತ್ಯ ಸಂಪನ್ಮೂಲ ಮತ್ತು ಕಾರ್ಯಕರ್ತರ ಪಡೆಯನ್ನು ರೂಢಿಸಬಲ್ಲ ಸಾಮರ್ಥ್ಯ, ಕ್ಷೇತ್ರದಲ್ಲಿ ಅವರಿಗಿರುವ ಜನಪ್ರಿಯತೆ ಮತ್ತು ಬೆಂಬಲ ಅಭ್ಯರ್ಥಿಯ ಆಯ್ಕೆಗೆ ಆಧಾರವಾಗಿರಬೇಕು.
12. ಚುನಾವಣಾ ಸಮಿತಿಯು ಯಾವುದೇ ಕಾರಣಕ್ಕೆ ಅದರ ನಡುವಳಿಕೆಗಳಿಂದ ಪಕ್ಷದ ಘನತೆಗೆ ಧಕ್ಕೆಯಾಗದಂತೆ ಮತ್ತು ಪಕ್ಷ ಸಂಘಟನೆಯಲ್ಲಿ ಯಾವುದೇ ಬಿರುಕು ಮೂಡದಂತೆ ಎಚ್ಚರಿಕೆಯನ್ನು ವಹಿಸಬೇಕು.
13. ಜಿಲ್ಲಾ/ಕ್ಷೇತ್ರ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿವಾದ ಉಂಟಾದಲ್ಲಿ ಎ.ಐ.ಸಿ.ಸಿ. ಹಾಗೂ ಕೆ.ಪಿ.ಸಿ.ಸಿ. ಉಸ್ತುವಾರಿ ಪದಾಧಿಕಾರಿಗಳ ಸಹಕಾರದಿಂದ ಅದನ್ನು ಪರಿಹರಿಸಿಕೊಂಡು ಸಾಧ್ಯವಾದಷ್ಟು ಸರ್ವಾನುಮತದಿಂದ ಗೆಲ್ಲಬಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸ ತಕ್ಕದ್ದು.
14. ಆಯ್ಕೆ ಪ್ರಕ್ರಿಯೆಯನ್ನು ಸಮಿತಿಯು 31/12/2022 ರ ಒಳಗೆ ಮುಗಿಸಿ 1 ರಿಂದ 3 ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ವಿವರವಾದ ದಿನಾಂಕ : 01/01/2023 ರ ಒಳಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಬೇಕು.
ಇಲ್ಲಿದೆ ಸಮಗ್ರ ಸುತ್ತೋಲೆ – Guidelines & PEC Members For DCC Meetings
https://pragati.taskdun.com/belagavividhanaparishathspeakerbasavaraj-horattiselection/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ