Kannada NewsKarnataka News

Breaking News : ಖಾನಾಪುರ ಬಳಿ ಪ್ರಯಾಣಿಕರ ಟೆಂಪೋ ಪಲ್ಟಿ: 28 ಜನರಿಗೆ ಗಾಯ

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಗರ್ಲಗುಂಜಿ ಗ್ರಾಮದ ಬಳಿ ಬೆಳಗಾವಿ ಗರ್ಲಗುಂಜಿ ರಸ್ತೆಯಲ್ಲಿ ಪ್ರಯಾಣಿಕರ ಟೆಂಪೋ ಪಲ್ಟಿಯಾದ ಪರಿಣಾಮ ಟೆಂಪೋದಲ್ಲಿದ್ದ 28 ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಈ ಘಟನೆಯಲ್ಲಿ ಗಾಯಗೊಂಡವರೆಲ್ಲರೂ ಬೆಳಗಾವಿ ತಾಲ್ಲೂಕಿನ ಹುದಲಿ ಗ್ರಾಮದ ಒಂದೇ ಕುಟುಂಬದವರು.
ಇವರೆಲ್ಲರೂ ಗರ್ಲಗುಂಜಿ ಗ್ರಾಮದಲ್ಲಿ ಶುಕ್ರವಾರ ನಿಗದಿಯಾಗಿದ್ದ ಮದುವೆ ನಿಶ್ಚಿತಾರ್ಥದಲ್ಲಿ ಭಾಗವಹಿಸಲು ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಗರ್ಲಗುಂಜಿ ಮತ್ತು ರಾಜಹಂಸಗಡ ಗ್ರಾಮಗಳ ನಡುವಿನ ಇಳಿಜಾರಿನಲ್ಲಿ ಸಾಗುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಟೆಂಪೋ ಚಾಲಕ ಇಳಿಜಾರಿನಲ್ಲಿ ವಾಹನವನ್ನು ನ್ಯೂಟ್ರಲ್ ಮಾಡಿದ್ದರಿಂದ ವೇಗವಾಗಿ ಹೊರಟಿದ್ದ ಟೆಂಪೋ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ದೂರು ದಾಖಲಿಸಿಕೊಂಡಿರುವ ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಇಬ್ಬರು ವಯೋವೃದ್ಧರು, ಐವರು ಚಿಕ್ಕ ಮಕ್ಕಳು ಮತ್ತು 12 ಜನ ಮಹಿಳೆಯರು ಸೇರಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಾಲ್ಲೂಕು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Related Articles

Back to top button