Kannada NewsKarnataka NewsPolitics

ಗೋವಾ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್

ಗೋವಾ ರಾಜ್ಯದಲ್ಲಿ ಬಹಳಷ್ಟು ಮಹಿಳೆಯರಿಗೆ ಸ್ತನ ಕ್ಯಾನ್ಸರ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿರಂತರವಾಗಿ ಅಭಿವೃದ್ದಿ ಹೊಂದುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ನಾವಿಣ್ಯಪೂರ್ಣ ತಂತ್ರಜ್ಞಾನ ಹಾಗೂ ನವೋದ್ಯಮಗಳು ಆವಿಷ್ಕಾರಗೊಳಿಸುವ ಪ್ರತಿಫಲವು ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಲಭಿಸುವಂತಾಗಬೇಕು. ಏರುತ್ತಿರುವ ವೈದ್ಯಕೀಯ ವೆಚ್ಚಕ್ಕೆ ತಂತ್ರಜ್ಞಾನ ಪರಿಹಾರವನ್ನು ಸೂಚಿಸಬೇಕೆಂದು ಗೋವಾ ರಾಜ್ಯದ ಆರೋಗ್ಯ, ವ್ಯಾಪಾರ ಹಾಗೂ ವಾಣಿಜ್ಯ ಸಚಿವರಾದ ವಿಶ್ವಜೀತ ರಾಣೆ ಹೇಳಿದರು.
ಬೆಳಗಾವಿಯ ಯುಎಸ್‌ಎಂ – ಕೆಎಲ್‌ಇ ವೈದ್ಯಕೀಯ ಕಾರ‍್ಯಕ್ರಮದ ದಶಮಾನೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವೈದ್ಯಕೀಯ ಕಾರ‍್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ವೈದ್ಯಕೀಯವಾಗಿ ಮುಂದುವರೆದ ತಂತ್ರಜ್ಞಾನದ ಮೂಲಕ ಶೀಘ್ರ ರೋಗಪತ್ತೆ ಮಾಡುವ ವಿಧಾನಗಳನ್ನು ಕಂಡು ಹಿಡಿಯುತ್ತಿದ್ದು, ಅವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿವೆ. ಗೋವಾ ರಾಜ್ಯದಲ್ಲಿ ಮಹಿಳೆಯರು ಹೆಚ್ಚಾಗಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

ಶೀಘ್ರ ಮತ್ತು ರೋಗ ಬರುವುದಕ್ಕಿಂತ ಮುಂಚೆ ಪತ್ತೆ ಮಾಡಲು ಅನುಕೂಲವಾಗುವ ತಂತ್ರಜ್ಞಾನವನ್ನು ಕಂಡು ಹಿಡಿಯಲಾಗಿದ್ದು, ಗೋವಾದ ಜನರಿಗೆ ಅದು ವರದಾನವಾಗಿದೆ. ಚಿಕ್ಕ ಡಿವೈಸ್ ಇರುವ ಒಂದು ಸಾಧನ ರೋಗ ಕಂಡು ಹಿಡಿದು ಚಿಕಿತ್ಸೆಗೆ ದಾರಿಯನ್ನು ಸುಗಮಗೊಳಿಸುತ್ತಿದೆ. ಅಂತ ಆವಿಷ್ಕಾರಗಳು ನಿರಂತರವಾಗಿ ನಡೆಯಬೇಕು ಮತ್ತು ಜನರಿಗೆ ಸದುಪಯೋಗವಾಗಬೇಕೆಂದು ತಿಳಿಸಿದರು.

ಕೇಂದ್ರ ಸರಕಾರದ ಅನುದಾನದಡಿ ಗೋವಾ ರಾಜ್ಯದಲ್ಲಿ ಸುಸಜ್ಜಿತ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ಶೀಘ್ರದಲ್ಲಿಯೇ ತಲೆ ಎತ್ತಲಿದೆ ಎಂದ ಅವರು ಸಮಾಜಕ್ಕೆ ಅನುಕೂಲವಾಗುವ ಕೆಎಲ್‌ಇ ಸಂಸ್ಥೆಯೊಂದಿಗೆ ಗೋವಾದ ಜನರು ಬೆರೆತುಹೋಗಿದ್ದಾರೆ. ಶಿಕ್ಷಣ ಆರೋಗ್ಯಕ್ಕೆ ಈ ಸಂಸ್ಥೆಯನ್ನೇ ನೆಚ್ಚಿಕೊಂಡಿದ್ದಾರೆ. ಡಾ. ಕೋರೆ ಅವರ ದೂರದೃಷ್ಟಿ ನಮಗೆ ಬಹಳ ಪ್ರಯೋಜನಕಾರಿಯಾಗಿದೆ. ಆದ್ದರಿಂದಲೇ ಇಂದು ಕೆಎಲ್‌ಇ ಸಂಸ್ಥೆ ಸಪ್ತಸಾಗರವನ್ನು ದಾಟಿ ಹೆಸರು ಗಳಿಸಿದೆ ಎಂದು ಶ್ಲಾಘಿಸಿದರು.

ಮಾಲ್ಡೀವ್ಸ್, ಶ್ರೀಲಂಕಾದೊಂದಿಗೆ ಒಡಂಬಡಿಕೆ:

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕಳೆದ ೧೦ ವರ್ಷಗಳ ಹಿಂದೆ ಯುಎಸ್ ಎಂ- ಕೆಎಲ್‌ಇ ವೈದ್ಯಕೀಯ ಕಾರ‍್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ೪೬೭ ವಿದ್ಯಾರ್ಥಿಗಳು ವೈದ್ಯಕೀಯ ಪದವಿಯನ್ನು ಪಡೆದು ಸೇವೆಗೆ ನಿಯೋಜನೆಗೊಂಡಿದ್ದಾರೆ.

ಅದರಂತೆ ಹುಬ್ಬಳಿಯ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದೊಂದಿಗೆ ಮಲೇಶಿಯಾದ ತಾಂತ್ರಿಕ ಮಹಾವಿದ್ಯಾಲಯವು ಒಡಂಬಡಿಕೆ ಮಾಡಿಕೊಳ್ಳಲಿದೆ. ಅಲ್ಲದೇ ಹಲವು ದೇಶಗಳು ಕೆಎಲ್‌ಇ ಸಂಸ್ಥೆಯೊಂದಿಗೆ ಕೈಜೋಡಿಸಲು ಮುಂದೆಬಂದಿದ್ದು, ಮಾಲ್ಡೀವ್ಸ್ ಮತ್ತು ಶ್ರೀಲಂಕಾ ದೇಶಗಳು ಶೀಘ್ರದಲ್ಲಿಯೇ ಕೆಎಲ್‌ಇ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ತಿಳಿಸಿದರು.

ಯುಎಸ್‌ಎಂ ಕೆಎಲ್‌ಇ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡಿ, ಇಲ್ಲಿ ಅಭ್ಯಸಿಸುತ್ತಿರುವ ವೈದ್ಯ ವಿದ್ಯಾರ್ಥಿಗಳು ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವ ವಿಶ್ವಜೀತ ರಾಣೆ, ಮಲೇಶಿಯಾದ ಕೌನ್ಸಿಲ್ ಮೆಂಬರ ಪ್ರೊ. ತಾನ ಶ್ರೀ ಡಾಟೋ ಜುಲ್ಕಿಫ್ಲಿಬಿ ಅಬ್ದುಲ್ ರಜಾಕ್, ನಿರ್ದೇಶಕರಾದ ಡಾ. ಅಹ್ಮದ ಸುಕಾರಿ ಹಲಿಮ, ಡೀನ್ ಪ್ರೊ. ಶೈಫುಲ್ ಬಹಾರಿ ಇಸ್ಮಾಯಿಲ್ ಡಾ. ಕಮುರುದ್ದಿನ ಜಾಲಮ್ ಅವರನ್ನು ಸತ್ಕರಿಸಲಾಯಿತು.

ಡಾ. ಎ ಸಿ ಪಾಂಗಿ, ಕಾಹೇರನ ಕುಲಪತಿ ಡಾ ವಿವೇಕ ಸಾವೋಜಿ, ಕುಲಸಚಿವ ಡಾ. ವಿ ಡಿ ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ. ಎ ಎಸ್ ಗೋದಿ, ಡಾ. ಆರ್ ಎಸ್ ಮುಧೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ಸದಾನಂದ ಪಾಟೀಲ ವಂದಿಸಿದರು. ಮಲೇಶಿಯಾ, ಭಾರತ ಸೇರಿದಂತೆ ವಿವಿಧ ದೇಶಗಳ ಸುಮಾರು ೬೦೦ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button