
ಪ್ರಗತಿವಾಹಿನಿ ಸುದ್ದಿ: ಅದ್ಧೂರಿ ಮದುವೆ ಸಮಾರಂಭದ ಬಳಿಕ ಮೊದಲ ರಾತ್ರಿಯೇ ನವವಧು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
22 ವರ್ಷದ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿರುವ ನವವಧು. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ತಾಲೂಕಿನ ಸೋಮಂಡೆಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಪೆನುಕೊಂಡ ಮೂಲದ ಹರ್ಷಿತಾ ಹಾಗೂ ಕರ್ನಾಟಕ ಮೂಲದ ನಾಗೇಂದ್ರ ಅವರ ಅದ್ಧೂರಿ ವಿವಾಹ ಸಮಾರಂಭ ನಡೆದಿತ್ತು. ನವದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಕೆಲವೇ ಗಂಟೆಗಳು ಕಳೆದಿತ್ತು. ನವದಂಪತಿ, ಎರಡೂ ಕಡೆಯ ಕುಟುಂಬ ವಧುವಿನ ಮನೆಯಲ್ಲಿತ್ತು. ನವದಂಪತಿಗಳ ಮೊದಲ ರಾತ್ರಿಗೆ ಸಿದ್ಧತೆ ಮಾಡಲಾಗಿತ್ತು.
ವರ ನಾಗೇಂದ್ರ ಸಿಹಿತಿಂಡಿ ತರಲೆಂದು ಹೊರ ಹೋಗಿದ್ದ ವಾಪಸ್ ಮನೆಗೆ ಬರುವಷ್ಟರಲ್ಲಿ ವಧು ಹರ್ಷಿತಾ ಮನೆಯ ಕೋಣೆ ಬಾಗಿಲು ಹಾಕಿಕೊಂಡಿದ್ದಳು. ರೂಮ್ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಎಷ್ಟೇ ಬಾಗಿಲು ಬಡಿದರೂ ತೆರೆದಿಲ್ಲ. ಗಾಬರಿಯಾದ ಕುಟುಂಬದವರು ಬಾಗಿಲು ಒಡೆದು ನೋಡಿದ್ದಾರೆ. ಅಷ್ಟರಲ್ಲಿ ಹರ್ಷಿತಾ ಆತ್ಮಹತ್ಯೆಗೆ ಶರಣಾಗಿದ್ದಳು.
ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ನವವಧು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.