ಪ್ರಗತಿವಾಹಿನಿ ಸುದ್ದಿ; ಲಂಡನ್: ವಿಶ್ವಾದ್ಯಾಂತ ವ್ಯಾಪಿಸಿರುವ ಮಾರಣಾಂತಿಕ ಕೊರೊನಾ ವೈರಸ್ ಬಡವ, ಬಲ್ಲಿದ ಎಂಬ ಬೇಧವಿಲ್ಲಾದಂತೆ ಹರಡುತ್ತಿದೆ. ಇದೀಗ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬ್ರಿಟೀಷ್ ಪ್ರಧಾನಿ ಸಚಿವಾಲಯ ತಿಳಿಸಿದೆ.
ಬೋರಿಸ್ ಜಾನ್ಸನ್ ಕಳೆದ ಮಾರ್ಚ್. 27 ರಂದು ತನ್ನಲ್ಲಿ ಕೊವಿಡ್-19 ನ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ಸ್ವತಃ ಘೋಷಿಸಿದ್ದರು. ಅಲ್ಲದೆ, 7 ದಿನಗಳ ಕಾಲ ತಮ್ಮ ಡೌನಿಂಗ್ ಸ್ಟ್ರೀಟ್ ನಿವಾಸದಲ್ಲಿ ಸ್ವಯಂ-ಪ್ರತ್ಯೇಕತೆಯಲ್ಲಿದ್ದರು.
ಒಂದು ವಾರಗಳ ಕಾಲ ಅವರು ಚೇತರಿಸಿಕೊಂಡ ನಂತರ ಶುಕ್ರವಾರ ಮತ್ತೆ ಕೆಲಸಕ್ಕೆ ಮರಳಲು ಚಿಂತನೆ ನಡೆಸಿದ್ದರು. ಆದರೆ, ದೇಹದ ತಾಪಮಾನ ಇಳಿಯದ ಕಾರಣ ಮನೆಯಲ್ಲೇ ಇದ್ದು ಕೆಲಸ ನಿರ್ವಹಿಸಲು ಮುಂದಾಗಿದ್ದರು. ದೇಹದ ತಾಪಮಾನ ಹೆಚ್ಚಿರುವುದು ಕೊರೋನಾ ಸೋಂಕಿನ ರೋಗದ ಗುಣ ಲಕ್ಷಣಗಳಲ್ಲೊಂದಾಗಿದೆ. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಇದೀಗ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯರ ಸಲಹೆಯ ಮೇರೆಗೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇಂದು ರಾತ್ರಿ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕೆಂದರೆ ಪ್ರಧಾನ ಮಂತ್ರಿಗಳಿಗೆ ವೈರಸ್ ಧನಾತ್ಮಕ ಪರೀಕ್ಷೆ ನಡೆಸಿದ 10 ದಿನಗಳ ನಂತರವೂ ಕೊರೋನಾ ವೈರಸ್‌ನ ನಿರಂತರ ರೋಗ ಲಕ್ಷಣಗಳು ಕಂಡು ಬರುತ್ತಿವೆ ಎಂದು ಡೌನಿಂಗ್ ಸ್ಟ್ರೀಟ್ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ