Belagavi NewsBelgaum NewsCrimeKannada NewsKarnataka NewsNational

*ಬೆಳಗಾವಿಯಲ್ಲಿ ಯುವತಿ ವಿಚಾರವಾಗಿ ತಲ್ವಾರ್, ಚಾಕುವಿನಿಂದ ಭೀಕರ ಹಲ್ಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುವತಿಯೊಂದಿಗಿನ ಸಲುಗೆಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಆರಂಭವಾದ ವೈಮನಸ್ಸು ತೀವ್ರ ಸಂಘರ್ಷಕ್ಕೆ ತಿರುಗಿದ್ದು, ತಲ್ವಾರ್ ಹಾಗೂ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿಯ ವಡಗಾವಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತರುಣ ಜಾಲಗಾರ (20), ಪ್ರೇಮ ಜಾಲಗಾರ (26), ಆದಿತ್ಯ ಪೂಜಾರಿ (20), ಪ್ರಶಾಂತ ಜಾಲಗಾರ (26) ಹಾಗೂ ಮಾರುತಿ ಮಂಜಾಲಕರ (23) ಎಂದು ಗುರುತಿಸಲಾಗಿದೆ.

ಕೇತನ್ ಬಬನ್ ಎಂಬಾತನೊಂದಿಗೆ ಆತ್ಮೀಯವಾಗಿದ್ದ ಯುವತಿಯೊಬ್ಬಳು ಇತ್ತೀಚೆಗೆ ಆತನಿಂದ ದೂರವಾಗಿ ಆಕಾಶ ಜಾಲಗಾರನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಈ ವಿಚಾರ ಕೇತನ್ ಹಾಗೂ ಆಕಾಶನ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಉಭಯ ಗುಂಪುಗಳ ನಡುವಿನ ವೈಷಮ್ಯವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಉದ್ದೇಶದಿಂದ ವಡಗಾವಿಯ ಜೈಲ್ ಶಾಲೆ ಮೈದಾನದಲ್ಲಿ ಎರಡೂ ಕಡೆಯವರು ಸೇರಿದ್ದರು.

ಮೈದಾನದಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದ ವೇಳೆ ಪರಿಸ್ಥಿತಿ ಏಕಾಏಕಿ ಉದ್ವಿಗ್ನಗೊಂಡಿದೆ. ಈ ಸಂದರ್ಭದಲ್ಲಿ ಕೇತನ್ ಮೇಲೆ ಹಲ್ಲೆ ನಡೆಸಲು ಆರೋಪಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಕೇತನ್‌ನನ್ನು ರಕ್ಷಿಸಲು ಮಧ್ಯಪ್ರವೇಶಿಸಿದ ಆತನ ಸ್ನೇಹಿತರ ಮೇಲೂ ತಲ್ವಾರ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಯುವತಿಯ ವಿಚಾರವಾಗಿ ಆರಂಭವಾದ ಮನಸ್ತಾಪ ಕೊನೆಗೆ ಎರಡು ಗುಂಪುಗಳ ನಡುವಿನ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಗಿದ್ದು, ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಕೇತನ್ ಬಬನ್ ಶಹಾಪುರ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಕುರಿತು ತನಿಖೆ ಮುಂದುವರಿದಿದೆಯೇ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಬಂಧಿತ ಆರೋಪಿಗಳ ವಿರುದ್ಧ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button