*ಯುವಕನ ಬಟ್ಟೆ ಬಿಚ್ಚಿಸಿ ಹೊಡೆದು ಮರ್ಮಾಂಗ ತುಳಿದು ಹಲ್ಲೆ: ರೇಣುಕಾಸ್ವಾಮಿ ರೀತಿ ಆಗುತ್ತೆ ಎಂದು ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಗೆ ಬಟ್ಟೆ ಬಿಚ್ಚಿಸಿ, ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಘಟನೆ ರೀತಿಯಲ್ಲೇ ಇದೀಗ ಮತ್ತೊಂದು ಪ್ರಕರಣ ನಡೆದಿದೆ.
ಹುಡುಗಿಯ ವಿಚಾರವಾಗಿ ಯುವಕನನ್ನು ಮನಬಂದಂತೆ ಹೊಡೆದು, ಬಟ್ಟೆ ಬಿಚ್ಚಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಕುಶಾಲ್ ಹಲ್ಲೆಗೊಳಗಾದ ಯುವಕ. ಯುವಕನನ್ನು ಥಳಿಸುತ್ತಿರುವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲು ಹರಿ ಬಿಡಲಾಗಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಎರಡು ವರ್ಷದ ಪ್ರೀತಿ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಬ್ಬನ ಪರಿಚಯವಾಗಿತ್ತು. ಇದನ್ನು ಸಹಿಸದೇ ಕುಶಾಲ್ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ. ಇದರಿಂದ ಸಿಟ್ಟಿಗೆದ್ದ ಯುವತಿ ಗೆಳೆಯ ಹಾಗೂ ಆತನ ಸ್ನೇಹಿತರ ಗುಂಪು ಕುಶಾಲ್ ನನ್ನು ಕರೆದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕುಶಾಲ್ ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಮರ್ಮಾಂಗಕ್ಕೆ ಥಳಿಸಿ ವಿಕೃತಿ ಮೆರೆದಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ರೀತಿ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಈ ಬಗ್ಗೆ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.