World Environment Day

ಕೋವಿಡ್-೧೯ ನಿಯಂತ್ರಣ: ಬೆಳಗಾವಿಗೆ ಲ್ಯಾಬ್ ಮಂಜೂರು- ರಾಜ್ಯದಲ್ಲಿ ಮತ್ತೆರಡು ಪಾಸಿಟಿವ್ ಪ್ರಕರಣ

ಸೋಂಕು ಹರಡುವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಸಚಿವ ಶ್ರೀರಾಮುಲು ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- : ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಮುಂದಿನ ಎರಡು ವಾರ ಮಹತ್ವದ ಅವಧಿಯಾಗಿದೆ. ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್-೧೯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿತುವ ಸಿದ್ಧತೆಗಳು ಕುರಿತು ಶನಿವಾರ (ಮಾ.೨೧) ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಂತರರಾಜ್ಯ ಜನರ ಸಂಚಾರದ ಮೇಲೆ ನಿಗಾ ವಹಿಸಲು ರಾಜ್ಯ ಪ್ರವೇಶಿಸುವ ರಸ್ತೆಗಳಲ್ಲಿ ಚುನಾವಣಾ ಚೆಕ್ ಪೋಸ್ಟ್ ಮಾದರಿಯಲ್ಲಿ ನಿಗಾ ಮತ್ತು ಆರೋಗ್ಯ ತಪಾಸಣಾ ತಂಡ ನಿಯೋಜಿಸಲು ಸಲಹೆ ನೀಡಿದರು.
ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಸಚಿವ ಶ್ರೀರಾಮಲು ತಿಳಿಸಿದರು.
ನೆರೆಯ ರಾಜ್ಯದ ಜನಸಂಚಾರ ಸಂಪೂರ್ಣ ಬಂದ್ ಮಾಡುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಸಾಮೂಹಿಕ ಪ್ರಾರ್ಥನೆ ಬದಲು ತಮ್ಮ ತಮ್ಮ ಮನೆಗಳಲ್ಲಿಯೇ ಜನರು ಪ್ರಾರ್ಥನೆ ಕೈಗೊಳ್ಳಲು ಮನವೊಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಸಚಿವರು ಮಾಹಿತಿಯನ್ನು ಪಡೆದುಕೊಂಡರು.

ಸೋಂಕಿತರಿಗೆ ವೆಂಟಿಲೇಶನ್ ಮೀಸಲು ಇಡಲು ಸೂಚನೆ

ಜಿಲ್ಲೆಯಲ್ಲಿ ಲಭ್ಯವಿರುವ ವೆಂಟಿಲೇಶನ್ ವ್ಯವಸ್ಥೆಯ ಪೈಕಿ ಶೇ.೩೦ ರಷ್ಟು ವೆಂಟಿಲೇಶನ್ ಬೆಡ್ ಗಳನ್ನು ಕೋವಿಡ್-೧೯ ಸೋಂಕಿತರಿಗೆ ಅಗತ್ಯಬಿದ್ದರೆ ಮೀಸಲು ಇಡಲು ಎಲ್ಲ ಆಸ್ಪತ್ರೆಗಳಿಗೂ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ಸಚಿವ ಶ್ರೀರಾಮುಲು ತಿಳಿಸಿದರು.
ಕಲ್ಬುರ್ಗಿ ಮತ್ತು ಮಂಗಳೂರಿನಲ್ಲಿ ಸಭೆಗಳನ್ನು ನಡೆಸಿ, ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಸೂಚನೆ ನೀಡಲಾಗಿದೆ.
ಬೆಳಗಾವಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ವೈದ್ಯರು, ಅಧಿಕಾರಿಗಳು, ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು.
ಸೋಂಕು ಹರಡುವಿಕೆ ತಡೆಗಟ್ಟಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಮುಂದಿನ ಎರಡು ಮಹತ್ವದ ಅವಧಿಯಾಗಿದೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು.

ಬೆಳಗಾವಿಯಲ್ಲಿ ಲ್ಯಾಬ್ ಸ್ಥಾಪನೆಗೆ ಆದೇಶ

ಬೆಳಗಾವಿಯಲ್ಲಿ ಪ್ರಯೋಗಾಲಯ ಅತೀ ಶೀಘ್ರದಲ್ಲೇ ಸ್ಥಾಪಿಸಲಾಗುವುದು.  ಲ್ಯಾಬ್ ಸ್ಥಾಪನೆಗೆ ತಕ್ಷಣವೇ ಪ್ರಕ್ರಿಯೆ ಆರಂಭಿಸುವಂತೆ ಸಚಿವ ಶ್ರೀರಾಮುಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕೋವಿಡ್ ನಿಯಂತ್ರಣ ಅಥವಾ ಚಿಕಿತ್ಸೆಗೆ ಯಾವುದೇ ರೀತಿಯ ಹಣದ ತೊಂದರೆಯಿಲ್ಲ; ಕೇಂದ್ರ ಸರ್ಕಾರ ಕೂಡ ಹಣ ನೀಡಲಿದೆ.
ಕ್ವಾರಂಟೈನ್ ಅವಧಿಯಲ್ಲಿ ಇರುವವರು ಯಾವುದೇ ಕಾರಣಕ್ಕೂ ಹೊರಗಡೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ೧೬ ಪಾಸಿಟಿವ್, ನಾಲ್ಕೈದು ಜನರು ಈಗಾಗಲೇ  ಗುಣಮುಖರಾಗಿದ್ದಾರೆ. ಇಬ್ಬರು ಶೀಘ್ರ  ಬಿಡುಗಡೆಯಾಗಲಿದ್ದಾರೆ.
ಸೋಂಕು ತಗುಲಿದರೆ ಸಾವು ಖಚಿತ ಎಂಬ ಭಯ ಜನರಲ್ಲಿದೆ. ಜಾಗೃತಿ ಮೂಡಿಸುವ ಮೂಲಕ ಇಂತಹ ಭಯವನ್ನು ದೂರ ಮಾಡಬೇಕಿದೆ.
ಜನರ ಆರೋಗ್ಯ ಮತ್ತು ದೇಶದ ಹಿತದೃಷ್ಟಿಯಿಂದ ಜನತಾ ಕರ್ಫ್ಯೂಗೆ ಎಲ್ಲರೂ ಬೆಂಬಲಿಸುವ ಮೂಲಕ ಕೋವಿಡ್-೧೯ ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಸಚಿವ ಶ್ರೀರಾಮುಲು ಮನವಿ ಮಾಡಿಕೊಂಡರು.

ಮಹಾರಾಷ್ಟ್ರದ ಜನರ ಪ್ರವೇಶ ನಿರ್ಬಂಧಿಸಲು ಮನವಿ

ಕರ್ನಾಟಕ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ನೆರೆಯ ಮಹಾರಾಷ್ಟ್ರದ ಜನರ ಪ್ರವೇಶವನ್ನು ಒಂದು ವಾರದ ಮಟ್ಟಿಗೆ‌ ನಿರ್ಬಂಧಿಸಲು ಉಭಯ ಸರ್ಕಾರಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಆಟೋ ನಿಲ್ದಾಣಗಳು, ಹೋಟೆಲ್ ಸೇರಿಂದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಜರ್ ಬಳಕೆಗೆ ಕ್ರಮಕೈಗೊಳ್ಳಬೇಕು ಎಂದರು.
ಸರ್ಕಾರಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಶಾಸಕ‌ ಅನಿಲ್ ಬೆನಕೆ  ಮನವಿ ಮಾಡಿಕೊಂಡರು.
ಕೆ.ಎಲ್.ಇ. ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ವಿ.ಜಾಲಿ ಮಾತನಾಡಿ, ತುರ್ತು ಪರಿಸ್ಥಿತಿ ‌ನಿಭಾಯಿಸಲು ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆಸ್ಪತ್ರೆ ಕ್ವಾರಂಟೈನ್ ಮತ್ತು ತುರ್ತು ಚಿಕಿತ್ಸೆಗೆ ಅನುಕೂಲವಾಗುವಂತೆ ಒಟ್ಟಾರೆ ೧೬೦ ಬೆಡ್ ಹಾಗೂ ವೆಂಟಿಲೇಶನ್ ಸೌಲಭ್ಯದ ೬ ಬೆಡ್ ಗಳ ಸಿದ್ಧವಾಗಿಟ್ಟುಕೊಳ್ಳಲಾಗಿದೆ ಎಂದು ವಿವರಿಸಿದರು.
ಕೋವಿಡ್ ನಿಯಂತ್ರಣಕ್ಕೆ ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಬಿಮ್ಸ್ ೬೫ ಹಾಗೂ ಕೆ.ಎಲ್.ಇ ೬೦ ಹಾಗೂ ನರ್ಸಿಂಗ್ ಹಾಸ್ಟೆಲ್ ಹೊಸ ಕಟ್ಟಡದಲ್ಲಿ ಕ್ವಾರಂಟೈನ್ ಗೆ ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ ಇದುವರೆಗೆ ಯಾವುದೇ ಸೋಂಕು ಪ್ರಕರಣ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ವಿವರಿಸಿದರು.
ಗೃಹ ಕ್ವಾರಂಟೈನ್ ಇರುವವರಿಗೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಇಬ್ಬರ ಗಂಟಲು ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣ ಕಂಡುಬಂದಿರುವುದರಿಂದ ಗಡಿಯಲ್ಲಿನ ರಸ್ತೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಭಾರೀ ಪ್ರಯಾಣಿಕರ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.
ದುಬೈಯಿಂದ ಅತೀ ಹೆಚ್ಚು ಅಂದರೆ ೯೮ ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೀಡಲಾಗುವ ಮಾಹಿತಿಯನ್ನು ಆಧರಿಸಿ ಗೃಹ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ.
ಚೀನಾದಿಂದ ಮೂರು ವಿದ್ಯಾರ್ಥಿಗಳು ೨೮ ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, ಯಾವುದೇ ಸೋಂಕು ಕಂಡುಬಂದಿಲ್ಲ ಎಂದು ವಿವರಿಸಿದರು.
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಜೆ ೫ ಗಂಟೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಸೈರನ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಬಿಮ್ಸ್ ೧೬ ಬೆಡ್ ಗಳ ಐಸೋಲೇಷನ್ ವಾರ್ಡ, ಕೆ.ಎಲ್.ಇ. ಆಸ್ಪತ್ರೆಯಲ್ಲಿ ೧೫ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಐಸೋಲೇಷನ್ ವಾರ್ಡಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಆರೋಗ್ಯ ತಪಾಸಣಾ ಘಟಕಗಳ ಸ್ಥಾಪಿಸಲಾಗಿದ್ದು, ಸಂಚಾರ ನಿರ್ಬಂಧಿಸಲಾಗಿದೆ.
ಜಿಲ್ಲೆಯಲ್ಲಿ ೧೬೭ ಜನರನ್ನು ಅವರವರ ಮನೆಯಲ್ಲಿ  ನಿಗಾ ವಹಿಸಲಾಗಿದೆ. ೩ ಜನರು ೨೮ ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದು,೧೩೨ ಜನರು ೧೪ ದಿನಗಳ ನಿಗಾ ಪೂರ್ಣಗೊಳಿಸಿದ್ದಾರೆ ಎಂದು ವಿವರಿಸಿದರು.
ನಗರದಲ್ಲಿ ಕೈಗೊಡಿರುವ ಕ್ರಮಗಳ ಬಗ್ಗೆ ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್. ತಿಳಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ, ಶಾಸಕರಾದ ಅನಿಲ್ ಬೆನಕೆ, ಮಹಾಂತೇಶ ದೊಡಗೌಡ್ರ, ಗಣೇಶ್ ಹುಕ್ಕೇರಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

 ರಾಜ್ಯದಲ್ಲಿ ಮತ್ತೆರಡು ಕೋವಿಡ್-೧೯ ಪಾಸಿಟಿವ್ ಪ್ರಕರಣ 

 ರಾಜ್ಯದಲ್ಲಿ ಇಂದು ಮತ್ತೆ ಎರಡು ಕೋವಿಡ್ -೧೯ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
 ಗೌರಿಬಿದನೂರ ಪ್ರಕರಣ ಸೇರಿದಂತೆ ಇದುವರೆಗೆ ಒಟ್ಟು ೧೬ ಪ್ರಕರಣಗಳು ಕಂಡುಬಂದಿದ್ದವು. ಹೊಸ ಎರಡು ಪ್ರಕರಣಗಳಿಂದ ಈ ಸಂಖ್ಯೆ ೧೮ ಕ್ಕೆ ಏರಿದೆ ಎಂದು ತಿಳಿಸಿದರು.

  ಸಿಎಂ ಜತೆ ಚರ್ಚಿಸಿ ನಿರ್ಧಾರ 

 ಅತೀ ಹೆಚ್ಚು ಕೋವಿಡ್-೧೯ ಪ್ರಕರಣಗಳು ಕಂಡುಬಂದಿರುವುದರಿಂದ ಉಭಯ ರಾಜ್ಯಗಳ ಜನರ ಪರಸ್ಪರ ಪ್ರವೇಶ ನಿರ್ಬಂಧಿಸುವ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು.
ಕೋವಿಡ್ -೧೯ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತೆಯಲ್ಲಿ ಸ್ಥಾಪಿಸಲಾಗಿರುವ ಐಸೋಲೇಷನ್ ಬೆಡ್ ಮತ್ತಿತರರ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಇದಕ್ಕೂ ಮುಂಚೆ ನಡೆದ ಸಭೆಯಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ನೆರೆಯ ಮಹಾರಾಷ್ಟ್ರದ ಜನರ ಪ್ರವೇಶವನ್ನು ಒಂದು ವಾರದ ಮಟ್ಟಿಗೆ‌ ನಿರ್ಬಂಧಿಸಲು ಉಭಯ ಸರ್ಕಾರಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.