ಕನ್ನಡ ಸಾಹಿತ್ಯ ಪರಿಷತ್ತಿನ ಕೆಂಗಲ್ ಹನುಮಂತಯ್ಯ ಪ್ರಶಸ್ತಿಗೆ ಬಿ.ಎಸ್ ಯಡಿಯೂರಪ್ಪ ಆಯ್ಕೆ
ಪ್ರಗತಿವಾಹಿನಿ ಸುದ್ದಿ: 2023ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಟಿತ ಶ್ರೀ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಮತ್ತು ರಾಜ್ಯದ ಮಾಜಿ ಸಿಎಂ ಶ ಬಿ.ಎಸ್. ಯಡಿಯೂರಪ್ಪನವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯ, ಕಲೆ, ಪರಂಪರೆ ಪೋಷಕರಾಗಿರುವ ಇಲ್ಲವೆ ಮೇಲ್ಕಂಡ ಕ್ಷೇತ್ರಗಳಲ್ಲಿ ಕನಿಷ್ಟ 25 ವರ್ಷಗಳಿಂದ ಸೇವಾ ನಿರತರಾದˌ 50 ವರ್ಷದ ವಯೋಮಾನ ಮೀರಿದ ವ್ಯಕ್ತಿ, ಸಂಘ, ಸಂಸ್ಥೆಗಳನ್ನು ಆಯ್ಕೆ ಮಾಡುವುದು ಈ ದತ್ತಿ ನಿಧಿಯ ಆಶಯವಾಗಿದೆ. 2016ರಿಂದಲೂ ಕೆಂಗಲ್ ಹನುಮಂತಯ್ಯ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ನೀಡುತ್ತಿದ್ದು, ಈ ಹಿಂದೆ ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ಬಿ.ಜಿ.ಬಣಕಾರ್, ಪ್ರಖ್ಯಾತ ಲೇಖಕರಾದ ಡಾ.ಸಿ.ಪಿ.ಕೃಷ್ಣಕುಮಾರ್, ಜನಪದ ಸಾಹಿತ್ಯಕ್ಕೆ ಹೊಸ ನೆಲೆ ನೀಡಿದ ಚೆನ್ನಣ್ಣ ವಾಲಿಕರ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಶಿಕ್ಷಣ ತಜ್ಞ ಮತ್ತು ರಾಜಕಾರಣಿ ಡಾ.ಪ್ರಭಾಕರ ಕೋರೆ, ನ್ಯಾಯಮೂರ್ತಿ ಡಾ. ಶಿವರಾಜ ವಿ ಪಾಟೀಲ, ಶಿಕ್ಷಣ ತಜ್ಞ ಮತ್ತು ಕುಲಾಧಿಪತಿ ಡಾ.ವಿ.ಜಿ. ಜೋಸೆಫ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ನಾಲ್ಕು ಸಲ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ, ಮೂರು ಸಲ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿರುವ ಬಿ.ಎಸ್. ಯಡಿಯೂರಪ್ಪನವರು ಸದಾ ಕನ್ನಡ ಮತ್ತು ಸಂಸ್ಕೃತಿಗೆ ಕೊಡುಗೆಗಳನ್ನು ನೀಡಿದ್ದಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿರ್ವಹಣೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಸಂಘಟಿತವಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರಿಗಿರುವ ಕನ್ನಡದ ಬಗೆಗಿನ ಕಾಳಜಿ ಮತ್ತು ಸಾಂಸ್ಕೃತಿಕ ಕೊಡುಗೆಯನ್ನು ಗಮನಿಸಿ ಈ ಪುರಸ್ಕಾರವನ್ನು ನೀಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ. ರಾಮಲಿಂಗ ಶೆಟ್ಟಿ ಮತ್ತು ದತ್ತಿದಾನಿಗಳ ಪರವಾಗಿ ಟಿ.ತಿಮ್ಮೇಶ್ ಅವರು ಭಾಗವಹಿಸಿದ್ದರು. ಆಯ್ಕೆ ಸಭೆಯು ಮಾರ್ಚಿ 17ರಂದೇ ಸಭೆ ಸೇರಿ ತೀರ್ಮಾನ ಕೈಗೊಂಡಿದ್ದರೂ ಯಡಿಯೂರಪ್ಪನವರು ರಾಜಕೀಯ ವ್ಯಕ್ತಿಯೂ ಆಗಿರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವವರೆಗೂ ಪುರಸ್ಕಾರವನ್ನು ಪ್ರಕಟಿಸಿರಲಿಲ್ಲ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ದತ್ತಿ ಪ್ರಶಸ್ತಿ ಪುರಸ್ಕೃತರಾದ ಬಿ.ಎಸ್. ಯಡಿಯೂರಪ್ಪನವರನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸುತ್ತದೆ. ನಾಡು-ನುಡಿಗೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಇದು ಪ್ರೇರಣೆಯಾಗಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ