
ಭೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬ ಹೆಸರಿನವನಾದ ನಾನು…
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ಭೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ 4ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎಸ್.ನಿಜಲಿಂಗಪ್ಪ ನಂತರ 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಯಡಿಯೂರಪ್ಪ.
ಭಾರತೀಯ ಜನತಾ ಪಾರ್ಟಿಯ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಪ್ರಸ್ತುತ ವಿಧಾನಸಭೆಯಲ್ಲಿ 2ನೆ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಚುನಾವಣೆ ಫಲಿತಾಂಶ ಬಂದ ತಕ್ಷಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಾಕರಿಸಿದ್ದರು. ಆದರೆ ಬಹುಮತ ಸಾಭೀತುಪಡಿಸಲು ಸಾಧ್ಯವಿಲ್ಲ ಎಂದು ಅರಿತು ಆರೇ ದಿನದಲ್ಲಿ ರಾಜಿನಾಮೆ ನೀಡಿದ್ದರು.
ನಂತರ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೇರಿತು. ಸಮ್ಮಿಶ್ರ ಸರಕಾರ 14 ತಿಂಗಳು ಆಡಳಿತ ನಡೆಸಿ ವಿಶ್ವಾಸ ಮತ ಕಳೆದುಕೊಂಡಿದ್ದರಿಂದ ನಿರ್ಗಮಿಸಬೇಕಾಯಿತು. ಹಾಗಾಗಿ ಪುನಃ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಗದ್ದುಗೆಗೇರಿದೆ.
ವಿಪಕ್ಷಗಳ ಗೈರು
ಇಂದು ಸಂಜೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿ.ಎಸ್.ಯಡಿಯೂರಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜುಬಾಯಿ ವಾಲಾ ಪ್ರಮಾಣ ವಚನ ಬೋಧಿಸಿದರು.
ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರು, ಗಣ್ಯರು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಎಸ್.ಎಂ.ಕೃಷ್ಣ ಪಾಲ್ಗೊಂಡಿದ್ದರು. ಕಾಂಗ್ರೆಸ್ ಬಂಡಾಯ ನಾಯಕ ರೋಶನ್ ಬೇಗ್, ಮಾಜಿ ಶಾಸಕ ಕೆ.ಎನ್.ರಾಜಣ್ಣ ಭಾಗವಹಿಸಿ ಗಮನ ಸೆಳೆದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಯಡಿಯೂರಪ್ಪ ಸ್ವತಃ ಎರಡೂ ಪಕ್ಷದ ನಾಯಕರಿಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದರು.
ಕಾಂಗ್ರೆಸ್, ಜೆಡಿಎಸ್ ಅಸಮಾಧಾನ
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿರುವುದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಬಿಜೆಪಿಗೆ ಅಧಿಕಾರಕ್ಕೆ ಏರಲು ಬಹುಮತವಿಲ್ಲ. ಇದು ಅಲ್ಪಮತದ ಸರಕಾರ. ರಾಜ್ಯಪಾಲರು ಬಿಜೆಪಿಗೆ ಸರಕಾರ ರಚಿಸಲು ಆಹ್ವಾನಿಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಚಿವಸಂಪುಟ ಸಭೆ
ಪ್ರಮಾಣ ವಚನ ಸ್ವೀಕರಿಸಿದ ನಂತರ ಯಡಿಯೂರಪ್ಪ ವಿಧಾನಸೌಧದತ್ತ ತೆರಳಿದ್ದು, ಸಚಿವ ಸಂಪುಟದ ಮೊದಲ ಸಭೆ ನಡೆಸಲಿದ್ದಾರೆ.
ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿರುವುದರಿಂದ ಅವರು ಅಧಿಕಾರಿಗಳೊಂದಿಗೆ ಸಾಂಪ್ರದಾಯಿಕವಾಗಿ ಸಚಿವಸಂಪುಟ ಸಭೆ ನಡೆಸುವರು. ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಅವರು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿನ ಸರಕಾರ ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿರುವ ತರಾತುರಿ ನಿರ್ಣಯಗಳನ್ನು ರದ್ಧುಪಡಿಸುವ ನಿರ್ಣಯ ತೆಗೆದುಕೊಳ್ಳಲಿದ್ದಾರೆೆ. ಜುಲೈ ತಿಂಗಳಲ್ಲಿ ಮಂಜೂರು ಮಾಡಲಾಗಿರುವ ಕಾಮಗಾರಿಗಳನ್ನು ತಡೆಹಿಡಿಸುವಂತೆ ಪ್ರಮಾಣ ವಚನ ಸ್ವೀಕಾರಕ್ಕಿಂತಲೂ ಮೊದಲೇ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಆದರೆ, ತಾವು ಯಾವುದೇ ರೀತಿಯ ದ್ವೇಷದ ರಾಜಕಾರಣ ನಡೆಸುವುದಿಲ್ಲ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.
ಇದನ್ನೂ ಓದಿ –
ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆದೇಶ