ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅನಧಿಕೃತ ಬಡಾವಣೆಗಳ ವಿರುದ್ಧ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಮರ ಮುಂದುವರಿದಿದೆ.
ಶನಿವಾರ ಸರ್ವೇ ನಂ.1078 / 3a ದಲ್ಲಿ ನಿರ್ಮಾಣವಾಗಿದ್ದ ಬಡಾವಣೆಯನ್ನು ಬುಡಾ ತೆರವುಗೊಳಿಸಿತು. ಬುಡಾ ಆಯುಕ್ತ ಪ್ರೀತಂ ನಸ್ಲಾಪುರೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಈಗಾಗಲೆ 28 ಅಕ್ರಮ ಬಡಾವಣೆಗಳನ್ನು ಬಡಾವಣೆಗಳನ್ನು ಬುಡಾ ತೆರವುಗೊಳಿಸಿದೆ. ಬೆಳಗಾವಿಯಲ್ಲಿ ಅಧಿಕೃತ ಬಡಾವಣೆಗಳಿಗಿಂತ ಹೆಚ್ಚು ಅನಧಿಕೃತ ಬಡಾವಣೆಗಳಿವೆ ಎನ್ನುವ ಮಾಹಿತಿ ಇದೆ. ಆದರೆ ಬಹುತೇಕ ಬಡಾವಣೆಗಳಲ್ಲಿ ಈಗಾಗಲೆ ಮನೆಗಳು ನಿರ್ಮಾಣವಾಗಿವೆ. 100 ರೂ. ಬಾಂಡ್ ಪೇಪರ್ ಮೇಲೆ ಕರಾರು ಮಾಡಿಕೊಂಡು ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.
ಈಗಾಗಲೆ ಮನೆಗಳಿರುವ ಬಡಾವಣೆಗಳನ್ನು ವಶಪಡಿಸಿಕೊಳ್ಳುವುದು ಮಹಾನಗರ ಪಾಲಿಕೆ ಕೆಲಸ. ಆದರೆ ಇನ್ನೂ ಮನೆಗಳಾಗದ ಬಡಾವಣೆಗಳನ್ನು ಬುಡಾ ಆರಂಭದಲ್ಲೇ ತೆರವುಗೊಳಿಸುತ್ತಿದೆ. ಇದರಿಂದಾಗಿ ಅಕ್ರಮ ಬಡಾವಣೆಗಳ ಸಂಖ್ಯೆ ಹೆಚ್ಚುವುದನ್ನು ತಡೆಯಬಹುದಾಗಿದೆ.
ಸಾರ್ವಜನಿಕರು ಅನಧಿಕೃತ ಬಡಾವಣೆಗಳಲ್ಲಿ ಜಾಗ ಖರೀದಿಸಬಾರದು. ಖರೀದಿಸುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ
– ಪ್ರೀತಂ ನಸ್ಲಾಪುರೆ,
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ