ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2005ರ ನಂತರ ಯಾವುದೇ ಹೊಸ ಬಡಾವಣೆ ನಿರ್ಮಾಣ ಸಾಧ್ಯವಾಗದೆ ಬಹುತೇಕ ನಿಷ್ಕ್ರೀಯವಾಗಿದ್ದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಈಗ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಸಿದ್ಧತೆ ನಡೆಸಿದೆ.
ಮೊದಲ ಹಂತದಲ್ಲಿ ಕಣಬರ್ಗಿ ರಸ್ತೆಯಲ್ಲಿ ಸುಮಾರು 160 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣಕ್ಕೆ ತಯಾರಿ ನಡೆದಿದೆ. ಕೆಲವು ರೈತರು ಕೋರ್ಟ್ ಮೆಟ್ಟಿಲೇರಿದ್ದರಿಂದಾಗಿ ಬಡಾವಣೆ ನಿರ್ಮಾಣ ಕಾರ್ಯ ಸ್ಥಗಿತವಾಗಿತ್ತು. ಈಚೆಗೆ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದ್ದು, ವಿವಾಧಿತ 15- 16 ಎಕರೆ ಜಾಗ ಹೊರತುಪಡಿಸಿ ಉಳಿದ ಜಾಗದಲ್ಲಿ ಕೆಲಸ ಆರಂಭವಾಗಲಿದೆ.
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ ಹೊಸ ಬಡಾವಣೆ ನಿರ್ಮಾಣ ಸಂಬಂಧ ಎಲ್ಲ ತಯಾರಿ ನಡೆಸಿದ್ದಾರೆ. ಸಧ್ಯದಲ್ಲೇ ನಡೆಯಲಿರುವ ಮಾಸಿಕ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ, ಸರಕಾರದ ಅನುಮೋದನೆಯೊಂದಿಗೆ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ.
ಈ ಬಡಾವಣೆಯಲ್ಲಿ ಮೊದಲಿನ ಯೋಜನೆ ಪ್ರಕಾರ 1,800 ಮನೆಗಳು ಮತ್ತು ಗ್ರುಪ್ ಹೌಸಿಂಗ್ ಯೋಜನೆ ರೂಪಿಸಲಾಗಿತ್ತು. ಈಗ ಪುನರ್ ರೂಪಿಸಲಾಗುತ್ತದೆ. ಗ್ರುಪ್ ಹೌಸಿಂಗ್ ಯೋಜನೆಯನ್ನು ಸಹ ಪುನರ್ ಪರಿಶೀಲಿಸಲು ನಿರ್ಧರಿಸಲಾಗಿದೆ.
160 ಎಕರೆ ಪ್ರದೇಶದಲ್ಲಿ ಅರ್ಧದಷ್ಟು ಸೈಟ್ ಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ. 20X30, 30X40, 40X60, 50X80 ಸೈಜಿನ ಸೈಟ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅರ್ಜಿ ಆಹ್ವಾನಿಸಿ ಹೆಚ್ಚಿನ ಬೇಡಿಕೆ ಬಂದಲ್ಲಿ ಲಾಟರಿ ಮೂಲಕ ಸೈಟ್ ವಿತರಣೆ ಮಾಡಲಾಗುತ್ತದೆ.
ಕಣಬರ್ಗಿ ರಸ್ತೆ ಬಡಾವಣೆಯ ಜೊತೆಗೇ ಹಿಂಡಲಗಾ, ಝಾಡಶಹಾಪುರ ಹಾಗೂ ಆನಗೋಳಗಳಲ್ಲಿ ಸಹ ಬಡಾವಣೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಎಲ್ಲ ತಯಾರಿ ನಡೆಸಲಾಗಿದೆ.
-ಪ್ರೀತಂ ನಸ್ಲಾಪುರೆ, ಬುಡಾ ಆಯುಕ್ತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ