ಈ ಬಾರಿಯ ಬಜೆಟ್ ನಲ್ಲಿ ಬೆಳಗಾವಿಗೆ ಬಂಪರ್ ನಿರೀಕ್ಷೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭಾರದ ಮಧ್ಯೆ ಕಾಂಗ್ರೆಸ್ ಸರಕಾರದ 2024 -25ನೇ ಸಾಲಿನ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಶುಕ್ರವಾರ ಮಂಡಿಸಲಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಸರಕಾರ ದಿವಾಳಿಯಾಗಿದೆ, ಅಭಿವೃದ್ಧಿಗೆ ಹಣವಿಲ್ಲ ಎನ್ನುವ ವಿರೋಧ ಪಕ್ಷದ ಆರೋಪಗಳ ಮಧ್ಯೆಯೂ, ಗ್ಯಾರಂಟಿ ಯೋಜನೆಗಳೂ ಅಭಿವೃದ್ಧಿಯಲ್ಲವೇ? ಇವು ಅಸಮಾನತೆಯನ್ನು ಹೊಗಲಾಡಿಸುವುದಿಲ್ಲವೇ? ಎನ್ನುತ್ತಲೇ, 3 ಲಕ್ಷದ 80 ಸಾವಿರ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸುವ ಸೂಚನೆಯನ್ನು ಸಿದ್ದರಾಮಯ್ಯ ನೀಡಿದ್ದಾರೆ.
ಬಜೆಟ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಸಿದ್ಧತೆ, ಚರ್ಚೆಗಳನ್ನು ನಡೆಸುತ್ತಿರುವ ಸಿದ್ದರಾಮಯ್ಯ, ಅಹಿಂದ ಮತ್ತು ಬಡವರ ಪರ ಬಜೆಟ್ ಮಂಡಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಜನಪ್ರಿಯವಾಗಿರಲಿದೆ ಎನ್ನುವುದು ಸಾಮಾನ್ಯ ಲೆಕ್ಕಾಚಾರ. ಆದರೆ ಗ್ಯಾರಂಟಿ ಯೋಜನೆಗಳಿಗೂ ಹಣ ಮೀಸಲಿಡಬೇಕಿದೆ, ಶಾಸಕರ ನಿಧಿಗೂ ಹಣ ನೀಡಬೇಕಿದೆ, ಹಿಂದಿನ ಬಿಜೆಪಿ ಸರಕಾರ ಬಾಕಿ ಉಳಿಸಿರುವ ಬಿಲ್ ಸಂದಾಯಕ್ಕೆ ಮತ್ತು ಅಪೂರ್ಣಗೊಳಿಸಿರುವ ಕಾಮಗಾರಿಗಳಿಗೂ ಹಣ ಒದಗಿಸಬೇಕಿದೆ.
ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದೆ. ಹಾಗೆಯೇ ಹೊಸ ಪಿಂಚಣಿ ಯೋಜನೆ (NPS) ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸುವ ಚುನಾವಣೆ ಪ್ರಣಾಳಿಕೆ ಭರವಸೆಯೂ ಉಳಿದುಕೊಂಡಿದೆ.
ಈ ಬಾರಿ ಬಜೆಟ್ ನಲ್ಲಿ ಜನಸಾಮಾನ್ಯರ ನಿರೀಕ್ಷೆ ಅಷ್ಟೊಂದು ಇಲ್ಲದಿದ್ದರೂ ಶಾಸಕರ ನಿರೀಕ್ಷೆ ಬಹಳಷ್ಟಿದೆ. ಪ್ರತಿ ಶಾಸಕರು ತಮ್ಮ ಕ್ಷೇತ್ರಕ್ಕೆ ಒಂದಿಷ್ಟು ಕೊಡುಗೆಗಳ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ 15ನೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ ಯಾವ ರೀತಿಯಲ್ಲಿ ಸಮತೋಲನ ಕಾಪಾಡುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.
ಬೆಳಗಾವಿ ವಿಭಜನೆ ನಿರೀಕ್ಷೆ
ಈ ಬಾರಿ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ ಹೆಚ್ಚಿನ ನಿರೀಕ್ಷೆಯಲ್ಲಿದೆ. ಕೇಂದ್ರದ ಹೆದ್ದಾರಿ ಯೋಜನೆಗಳು ಹಾಗೂ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲಿನ ಮೊತ್ತವನ್ನು ಮೀಸಲಿಡುವ ಜೊತೆಗೆ ಹಲವಾರು ಯೋಜನೆಗಳನ್ನು ಘೋಷಿಸುವ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ. ಲೋಕೋಪಯೋಗಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅನೇಕ ಯೋಜನೆಗಳ ಕನಸು ಕಂಡಿದ್ದು, ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಫ್ಲೈ ಓವರ್ ನಿರ್ಮಾಣ, ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣ, ಹಲವಾರು ರಸ್ತೆಗಳ ಅಭಿವೃದ್ಧಿ ಪ್ರಸ್ತಾವನೆಗಳಿವೆ. ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕಿದೆ. ಹೊಸ ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾವನೆ ಇದೆ. ಹೊಸದಾಗಿ ರಚನೆಯಾಗಿರುವ ತಾಲೂಕುಗಳಿಗೆ ಮೂಲಭೂತ ಸೌಲಭ್ಯಗಳಿಗೆ ಹಣ ಒದಗಿಸಬೇಕಿದೆ. ಅಪೂರ್ಣವಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಣ ಒದಗಿಸಬೇಕಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಕ್ಷೇತ್ರಕ್ಕೆ ಶೈಕ್ಷಣಿಕ ಯೋಜನೆಗಳನ್ನು, ಹೊಸ ಕೈಗಾರಿಕೆಗಳನ್ನು ತರುವ ಕನಸು ಹೊತ್ತಿದ್ದಾರೆ. ತನ್ಮೂಲಕ, ಹಿಂದುಳಿದಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿಸುವ ಪ್ರಯತ್ನದಲ್ಲಿದ್ದಾರೆ.
ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಮತ್ತು ನೂತನ ಶಾಸಕರ ಭವನ ನಿರ್ಮಾಣದ ಪ್ರಸ್ತಾವನೆಯೂ ಹಾಗೆಯೇ ಉಳಿದುಕೊಂಡಿದೆ.
ಇವೆಲ್ಲದರ ಜೊತೆಗೆ ಬೆಳಗಾವಿ ಜಿಲ್ಲೆ ವಿಭಜನೆಯ ಕೂಗು ಈ ಬಾರಿ ಸಾಕಾರವಾಗುವ ನಿರೀಕ್ಷೆ ಮೂಡಿದೆ. ಜಿಲ್ಲೆಯನ್ನು ಆಡಳಿತದ ದೃಷ್ಟಿಯಿಂದ ವಿಭಜಿಸಬೇಕೆನ್ನುವ ಉದ್ದೇಶವನ್ನು ಜಿಲ್ಲೆಯ ಇಬ್ಬರು ಸಚಿವರೂ ಹೊಂದಿದ್ದಾರೆ. ಈ ಕುರಿತು ಈಗಾಗಲೆ ಸರಕಾರದ ಮಟ್ಟಕ್ಕೆ ಪ್ರಸ್ತಾವನೆ ಹೋಗಿದೆ. ಬೆಳಗಾವಿ 3 ಜಿಲ್ಲೆಗಳಾಗಿ ವಿಭಜನೆಯಾಗಬೇಕೆಂದರೆ ಹೊಸ ಜಿಲ್ಲೆಗಳನ್ನು ಕಟ್ಟುವುದಕ್ಕೆ ದೊಡ್ಡ ಮೊತ್ತದ ಆರ್ಥಿಕ ಸಂಪನ್ಮೂಲ ಒದಗಿಸುವುದು ಅನಿವಾರ್ಯವಾಗಲಿದೆ.
ಒಟ್ಟಾರೆ, ಬೆಳಗಾವಿ ಈ ಬಾರಿ ಬಜೆಟ್ ನಲ್ಲಿ ಅನೇಕ ನಿರೀಕ್ಷೆಗಳನ್ನು ಹೊತ್ತುಕೊಂಡು ಎದುರು ನೋಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟರಮಟ್ಟಿಗೆ ಸ್ಪಂದಿಸಲಿದ್ದಾರೆ ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ