HealthKannada NewsKarnataka NewsPolitics

*ಆರೋಗ್ಯ ಇಲಾಖೆಗೆ ಬಂಪರ್: ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ 400 ಕೋಟಿ ರೂ. ಹೆಚ್ಚುವರಿ*

ಪ್ರಗತಿವಾಹಿನಿ ಸುದ್ದಿ: ಕಳೆದ ವರ್ಷ ಪ್ರಾರಂಭಿಸಲಾದ, ತಡೆಗಟ್ಟಬಹುದಾದ ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸುವ ಅಭಿಯಾನದ ಪರಿಣಾಮವಾಗಿ ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣವು ಶೇ.24ರಷ್ಟು ಇಳಿಕೆಯಾಗಿರುತ್ತದೆ. ಈ ಅಭಿಯಾನದಡಿ ಪ್ರತಿ ತಾಯಂದಿರ ಮರಣವನ್ನು ತಜ್ಞರ ಸಮಿತಿಯಿಂದ ವಿಶ್ಲೇಷಿಸಿ ಗುಣಾತ್ಮಕವಾದ ಗರ್ಭಿಣಿ ಮತ್ತು ಪ್ರಸವ ಸೇವೆಗಳನ್ನು ನೀಡಲಾಗುತ್ತಿದೆ. ಹೆರಿಗೆ ಆಸ್ಪತ್ರೆಗಳಿಗೆ ಮಾರ್ಗದರ್ಶನ, ಹೆಚ್ಚಿನ ಮಾನವ ಸಂಪನ್ಮೂಲ ಮತ್ತು ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ.

139. ಅನೀಮಿಯಾ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆಯಡಿ ಶಾಲಾ ಕಾಲೇಜುಗಳ 52 ಲಕ್ಷ ಮಕ್ಕಳಿಗೆ ರಕ್ತಹೀನತೆ ತಪಾಸಣೆ ನಡೆಸಲಾಗಿದೆ. ರಕ್ತಹೀನತೆ ಕಂಡುಬಂದಿರುವ 11.7 ಲಕ್ಷ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಇದರಲ್ಲಿ 3.7 ಲಕ್ಷ ಮಕ್ಕಳು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಉಳಿದ ಮಕ್ಕಳಿಗೆ ಚಿಕಿತ್ಸೆ ಮತ್ತು ಅನುಸರಣೆ ಮುಂದುವರೆಸಲಾಗಿದೆ. 

140. ಹೃದಯದ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ST-Elevated Myocardial Infarction (STEMI) ಕಾರ್ಯಕ್ರಮದಡಿ ಒಟ್ಟು 9.4 ಲಕ್ಷ ECG ಗಳನ್ನು ಮಾಡಲಾಗಿದ್ದು, 13,933 ತೀವ್ರ ಹೃದಯಾಘಾತದ ರೋಗಿಗಳನ್ನು ಪತ್ತೆ ಹಚ್ಚಿ ಇವರಲ್ಲಿ 7,668 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲಾಗಿದೆ.

141. ಕಳೆದ ಮೂರು ವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಕೈಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು. ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ 900 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.

Home add -Advt

142. ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಲಿ ಚಾಲ್ತಿಯಲ್ಲಿರುವ 2018ರ ಚಿಕಿತ್ಸಾ ಪ್ಯಾಕೇಜ್‌ ದರಗಳನ್ನು ಪರಿಷ್ಕರಿಸಿ ಹೆಚ್.ಬಿ.ಪಿ.-2022 ಪ್ಯಾಕೇಜ್‌ ದರಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರಿಂದ ಬಡರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ. ಇದಕ್ಕಾಗಿ 400 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುವುದು. ಸದರಿ ಯೋಜನೆಯನ್ನು ಯಶಸ್ವಿನಿ, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ರಾಜ್ಯ ವಿಮಾ ಯೋಜನೆ ಮತ್ತು ಅನ್ವಯಿಸುವ ಇತರ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅನುಷ್ಠಾನಗೊಳಿಸಲಾಗುವುದು. 

143. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಮಗ್ರ ಆಘಾತ ಆರೈಕೆ (Trauma Care) ಸೇವೆಗಳನ್ನು ಒದಗಿಸಲು ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಐಸಿಯುಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನು ಹಂತ ಹಂತವಾಗಿ ಪೂರೈಸುವ ಮೂಲಕ ಮೇಲ್ದರ್ಜೆಗೇರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 45 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.

144. ತೀವ್ರತರವಾದ ಅಪೌಷ್ಟಿಕತೆಯನ್ನು (Severe Acute Malnutrition) ಹೊಂದಿರುವ ಮಕ್ಕಳಿಗೆ ವೈದ್ಯಕೀಯ ಮತ್ತು ಪೌಷ್ಟಿಕಾಂಶದ ಚಿಕಿತ್ಸೆ ನೀಡಲು ಈಗಾಗಲೇ 86 ತಾಲ್ಲೂಕುಗಳಲ್ಲಿ ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳು (NRC) ಕಾರ್ಯನಿರ್ವಹಿಸುತ್ತಿದ್ದು, ಇದನ್ನು ಉಳಿದ 63 ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ.ಗಳನ್ನು ಒದಗಿಸಲಾಗುವುದು.

145. ಕಡಿಮೆ ಜನನ ತೂಕದ ಹಾಗೂ ಅನಾರೋಗ್ಯ ಪೀಡಿತ ನವಜಾತ ಶಿಶುಗಳಿಗೆ ಅಗತ್ಯವಿರುವ ವಿಶೇಷ ಔಷಧೋಪಚಾರ, ಸಮಗ್ರ ನವಜಾತ ಶಿಶು ಆರೈಕೆ ಸೌಲಭ್ಯಗಳು ಹಾಗೂ ಪ್ರಸವಪೂರ್ವ ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗುವುದು. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 10 ಕೋಟಿ ರೂ.ಗಳನ್ನು ಒದಗಿಸಲಾಗುವುದು.

146. ಟೈಪ್-1 ಮಧುಮೇಹದಿಂದ (Type-1 Diabetes) ಬಳಲುತ್ತಿರುವ 18 ವರ್ಷ ವಯಸ್ಸಿನವರೆಗಿನ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಉಚಿತ ಇನ್ಸುಲಿನ್ ಪೆನ್ಗಳನ್ನು ನೀಡಲಾಗುವುದು.

147. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರವನ್ನು ಬಲವರ್ಧನೆಗೊಳಿಸಲು KKRDB ವಾರ್ಷಿಕ ಸ್ಥಳೀಯ ಯೋಜನೆಯಲ್ಲಿ (micro plan) ಆದ್ಯತೆ ಮೇರೆಗೆ ಅನುದಾನವನ್ನು ಮೀಸಲಿರಿಸಲಾಗುವುದು. 

148. ಗಣಿಬಾಧಿತ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರಿನ ಎಲ್ಲಾ ತಾಲ್ಲೂಕುಗಳಲ್ಲಿ ಸಮಗ್ರ ಆರೋಗ್ಯ ಸೇವೆಗಳನ್ನು KMERC ಅನುದಾನದಡಿಯಲ್ಲಿ ವಿಸ್ತರಿಸಲಾಗುವುದು.‌

149. ಗಂಭೀರ, ದೀರ್ಘಕಾಲೀನ ಹಾಗೂ ಮಾರಣಾಂತಿಕ ಕಾಯಿಲೆಗಳೊಂದಿಗೆ ಬದುಕುತ್ತಿರುವ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಗೃಹಾಧಾರಿತ ಉಪಶಮನ ಆರೈಕೆಯನ್ನು Pallium India ಸಂಸ್ಥೆಯ ಸಹಯೋಗದೊಂದಿಗೆ ನೀಡಲಾಗುವುದು.

150. ರಾಜ್ಯದಲ್ಲಿ ಬೇಡಿಕೆ ಇರುವ 50 ಕೇಂದ್ರಗಳಲ್ಲಿ 150 ಹಾಸಿಗೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ವಾರ್ಷಿಕವಾಗಿ 1.35 ಲಕ್ಷ ಡಯಾಲಿಸಿಸ್‌ ಸೇವೆಗಳನ್ನು ಒದಗಿಸಲಾಗುವುದು. ಇದಕ್ಕಾಗಿ 20 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ.

151. ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲಾಗುವುದು.

152. ಜಿಲ್ಲಾ ಆರೋಗ್ಯ ಅಧಿಕಾರಿ (DHO), ಜಿಲ್ಲಾ ಶಸ್ತ್ರಚಿಕಿತ್ಸಕರು (DS) ಇತ್ಯಾದಿ ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳ ನೇಮಕಾತಿಯಲ್ಲಿ ವಸ್ತುನಿಷ್ಠತೆಯನ್ನು ತರುವ ಮೂಲಕ ಸಾರ್ವಜನಿಕ ಆರೋಗ್ಯ ವೃಂದವನ್ನು (Public Health Cadre) ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು. 

153. ಡಿಜಿಟಲ್‌ ಆರೋಗ್ಯ ಕಾರ್ಯಕ್ರಮದಡಿ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:

• ʻಸಮಸ್ತʼ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಆರೋಗ್ಯ ಇಲಾಖೆಯ ಎಲ್ಲಾ ಕ್ಷೇತ್ರ ಸಿಬ್ಬಂದಿ ನಿರ್ವಹಿಸುತ್ತಿರುವ ವಹಿಗಳ ಡಿಜಿಟಲೀಕರಣ; 

• ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ‌ ಎಲ್ಲಾ ರೋಗಿಗಳಿಗೆ ಸಂಪೂರ್ಣ ಗಣಕೀಕೃತ ನೋಂದಣಿ,  ಆರೋಗ್ಯ ದಾಖಲೆಗಳ ಡಿಜಿಟಲೀಕರಣ ಮತ್ತು ಯುಪಿಐ ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿ;

• ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಲಿ-ರೇಡಿಯಾಲಜಿ (Scanning) ಮತ್ತು ಟೆಲಿ-ಲೇಬರ್ ರೂಮ್‌ಗಳ (Smart Labour Room) ಅಳವಡಿಕೆ.

154. ಇಸ್ಕಾನ್ ಮೂಲಕ ರೋಗಿಗಳಿಗೆ ಆಹಾರ ಪೂರೈಕೆಯ ಯಶಸ್ವಿ ಮಾದರಿಯನ್ನು ರಾಜ್ಯದ ಆಯ್ದ  ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು.

155. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಆಯ್ದ ಆಯುಷ್ ಆಸ್ಪತ್ರೆಗಳಲ್ಲಿ ಪಂಚಕರ್ಮ ಘಟಕಗಳನ್ನು ಸ್ವಾವಲಂಬಿ (self-sustaining) ಮಾದರಿಯಲ್ಲಿ ಸ್ಥಾಪಿಸಲಾಗುವುದು.

156. ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.

*ವೈದ್ಯಕೀಯ ಶಿಕ್ಷಣ*

157. ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಸೌಕರ್ಯವನ್ನು ಇನ್ನಷ್ಟು ಸದೃಢಗೊಳಿಸಲು ಕೆಳಕಂಡ ಪ್ರಮುಖ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ:- 

• ಕಾರವಾರದಲ್ಲಿ 198 ಕೋಟಿ ರೂ. ವೆಚ್ಚದ 450 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನಲ್ಲಿ 10 ಕೋಟಿ ರೂ. ವೆಚ್ಚದ ಟ್ರಾಮಾ ಕೇರ್ ಕೇಂದ್ರ ಮತ್ತು ಮೈಸೂರು ಹಾಗೂ ತುಮಕೂರಿನಲ್ಲಿ ೯೨ ಕೋಟಿ ರೂ. ವೆಚ್ಚದ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 

• ೨೩೬ ಕೋಟಿ ರೂ. ವೆಚ್ಚದ ಹುಬ್ಬಳ್ಳಿಯ ಜಯದೇವ ಹೃದ್ರೋಗ ಪ್ರಾದೇಶಿಕ ಕೇಂದ್ರದ ಕಟ್ಟಡವನ್ನು ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆಗೊಳಿಸಲಾಗುವುದು.  

• ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ 1,000 ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಟರ್ಷಿಯರಿ ಆರೈಕೆ ಮತ್ತು ಅಂಗಾಂಗ ಕಸಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.

158. 2026-೨೭ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳಿಗೆ 620 ಕೋಟಿ ರೂ.ಗಳ ಅನುದಾನವನ್ನು ಮತ್ತು ಉಪಕರಣಗಳ ಖರೀದಿಗಾಗಿ 220 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. 

159. ಮೈಸೂರಿನ 400 ಹಾಸಿಗೆ ಸಾಮರ್ಥ್ಯದ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ 180 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು.  

160. ಹಿಂದಿನ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು 300 ಹಾಸಿಗೆಯ ಆಸ್ಪತ್ರೆಯನ್ನು ನಿರ್ಮಿಸಲು ಅನುಮೋದಿಸಲಾಗಿರುತ್ತದೆ. ಅಲ್ಲದೆ, ಬಾಗಲಕೋಟೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ. ಸದರಿ ಕಾಲೇಜುಗಳ ಕಾರ್ಯಾಚರಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

161. ವಿಜಯಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು.  

162. ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು. 

163. ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಕ್ಯಾನ್ಸರ್ ಆಸ್ಪತ್ರೆಯನ್ನು ಮುನಿರಾಬಾದ್-ಟಿ.ಬಿ.ಡ್ಯಾಂನಲ್ಲಿ ಸ್ಥಾಪಿಸಲಾಗುವುದು.

164. ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು 15 ಕೋಟಿ ರೂ.ಗಳ ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು.

165. ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐ.ವಿ.ಎಫ್ ಕೇಂದ್ರಗಳನ್ನು ಸ್ಥಾಪಿಸಲು ತಲಾ ಒಂದು ಕೋಟಿ ರೂ. ನೀಡಲಾಗುವುದು. 

166. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣಗೊಳಿಸಲಾಗುವುದು. ಬೆಂಗಳೂರು ವೈದ್ಯಕೀಯ ಕಾಲೇಜಿನ MBBS ಮತ್ತು BDS ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ 10 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು.

Related Articles

Back to top button