*ಬುರುಡೆ ಕೇಸ್: ಜನಾದರ್ನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ ಸಂಸದ ಸೆಂಥಿಲ್*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎಂದು ಹೇಳಿದ್ದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ತಮ್ಮ ಹೆಸರು ಪ್ರಸ್ತಾಪಿಸಿ ಆರೋಪ ಮಾಡಿದ್ದಕ್ಕಾಗಿ ಸೆಂಥಿಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಪ್ರಕರಣ ಸಂಬಂಧ 42 ಎಸಿಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪಿಸಿಆರ್ ಫೈಲ್ ಮಾಡಿದ್ದು, ಸೆಪ್ಟೆಂಬರ್ 11ಕ್ಕೆ ವಿಚಾರಣೆ ನಡೆಯಲಿದೆ.
ಸೆಂಥಿಲ್ ಹೇಳಿದ್ದೇನು..?
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸೆಂಥಿಲ್, ಬುರುಡೆ ಕೇಸ್‌ನಲ್ಲಿ ನನ್ನ ವಿರುದ್ಧ ಶಾಸಕ ಜನಾರ್ಧನ ರೆಡ್ಡಿ ಆರೋಪ ಮಾಡಿದ್ದಾರೆ. ಆದ್ದರಿಂದ ಮೊಕದ್ದಮೆ ಹೂಡಿದ್ದೇನೆ. ಅವರು ಕೋರ್ಟ್‌ನಲ್ಲಿ ಉತ್ತರಿಸಲಿ ಎಂದು ಹೇಳಿದ್ದಾರೆ.
ಯಾವುದೋ ವಾಟ್ಸಾಪ್ ನೋಡಿ ಹೀಗೆ ಹೇಳಿದ್ದಾರೆ. ನಾನೇ ಮಾಸ್ಟರ್ ಮೈಂಡ್ ಸ್ಕ್ರಿಪ್ಟ್ ರೈಟರ್ ಅಂತ ಹೇಳಿದ್ದಾರೆ. ಪ್ರಾರಂಭದಲ್ಲಿ ಈ ರೀತಿಯ ಚೈಲ್ಡಿಶ್ ವಿಚಾರಕ್ಕೆ ನನಗೆ ಉತ್ತರ ಕೊಡಬೇಕಾ ಅನ್ನಿಸಿತ್ತು. ಪಾರ್ಲಿಮೆಂಟಲ್ಲಿ ನನಗೆ ಬೇರೆ ಬೇರೆ ವಿಚಾರ ಇರುತ್ತೆ. ಹೀಗಾಗಿ ನಾನು ಇದನ್ನ ಲೈಟ್ ಆಗಿ ತೆಗೆದುಕೊಂಡಿದ್ದೆ ಎಂದರು.
ಈಗ ಡೈಲಿ ಒಂದು ಸ್ಟೋರಿ ಬಿಲ್ಡಪ್ ಆಗ್ತಿದೆ. ಹೀಗಾಗಿ ಇದರ ಬಗ್ಗೆ ಮಾತನಾಡಲು ಸರಿಯಾದ ಸಮಯ. ಈ ವಿಚಾರ ಇಟ್ಟುಕೊಂಡು ನನ್ನ ಇಮೇಜ್ ಡ್ಯಾಮೇಜ್ ಮಾಡಲು ಹೊರಟಿದ್ದಾರೆ. ನಾನು ಕರ್ನಾಟಕದಲ್ಲಿ ಹತ್ತು ವರ್ಷ ಕೆಲಸ ಮಾಡಿದ್ದೇನೆ. ಯಾವ ರೀತಿ ಕೆಲಸ ಮಾಡಿದ್ದೀನಿ ಎಂದು ತಾವೆಲ್ಲ ನೋಡಿದ್ದೀರಿ. ಈ ಆರೋಪ ಮಾಡಿರುವ ವ್ಯಕ್ತಿ ಯಾರೆಂದು ಕೂಡ ತಮಗೆಲ್ಲ ಗೊತ್ತಿದೆ ಎಂದರು.
ಕರ್ನಾಟಕದ ಸಂಪತ್ತನ್ನ ಲೂಟಿ ಮಾಡಿ ಏಳು ವರ್ಷ ಜೈಲು ಶಿಕ್ಷೆಗೆ ಒಳಗಾದವರು ಅವರು. ಇಂತಹ ವ್ಯಕ್ತಿ ಹೇಳಿದ ವಿಷಯವನ್ನ ಹಾಗೆ ಬಿಟ್ಟರೆ ದೊಡ್ಡದಾಗುತ್ತೆ. ಈಗ ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತಿದ್ದೀನಿ. ಕೋರ್ಟ್ ಗೆ ಬಂದು ಉತ್ತರ ಕೊಡಲಿ ಎಂದು ಹೇಳಿದರು.
ನಾನು ಇಡೀ ದೇಶದಲ್ಲಿ ಬಲಪಂಥೀಯ ರಾಜಕೀಯವನ್ನು ಎದುರಿಸುತ್ತಾ ಬಂದಿದ್ದೀನಿ. ನನ್ನ ಕೆಲಸಕ್ಕೂ ರಾಜೀನಾಮೆ ಕೊಟ್ಟು ಎದುರಿಸುತ್ತಾ ಬಂದಿದ್ದೀನಿ. ಅದನ್ನ ನಾನು ರೆಸಿಗ್ರೇಷನ್ ಲೆಟರ್ ನಲ್ಲೂ ಬರೆದಿದ್ದೇನೆ. ನಾನು ಯಾವುದನ್ನು ಮರೆಮಾಚುವ ಕೆಲಸ ಮಾಡುವುದಿಲ್ಲ. ಇದನ್ನು ಮನಸಲ್ಲಿ ಇಟ್ಟುಕೊಂಡು ರಾಜಕೀಯ ಪ್ರೇರಿತವಾಗಿ ಈ ರೀತಿ ಮಾಡಿರುವುದು ಗೊತ್ತಾಗಿದೆ. ನನಗೆ ದೆಹಲಿಯಲ್ಲಿ ಭೇಟಿಯಾಗಿ ಬುರುಡೆ ಕೊಟ್ಟಿದ್ದಾರೆ ಅಂತಿದ್ದಾರೆ. ನನಗೆ ದೆಹಲಿಯಲ್ಲಿ ಮನೆಯನ್ನೇ ಕೊಟ್ಟಿಲ್ಲ. ಈ ಸರ್ಕಾರ ಒಂದು ವರ್ಷ ಆದ್ರೂ ನನಗೆ ಇನ್ನೂ ಮನೆಯನ್ನೇ ಕೊಟ್ಟಿಲ್ಲ. ನಾನು ಇನ್ನೂ ತಮಿಳುನಾಡು ಮನೆಯಲ್ಲೇ ಇದ್ದೀನಿ. ತಲೆ ಬುರುಡೆ ಎಲ್ಲಿ ಸಿಗುತ್ತೆ ಅಂತ ನನಗೆ ಗೊತ್ತಿಲ್ಲ. ಜನಾರ್ಧನ ರೆಡ್ಡಿಗೆ ಇದು ಗೊತ್ತಿರಬೇಕು ಎಂದರು.
ಧರ್ಮಸ್ಥಳದ ಬಗ್ಗೆ ನಾನು ಮಾತನಾಡೋದಿಲ್ಲ. ಕ್ರಿಮಿನಲ್ ದೂರು ಇದೆ ತನಿಖೆ ನಡೆಯುತ್ತಿದೆ. ಮಧ್ಯದಲ್ಲಿ ಮಾತನಾಡೋಕೆ ಯಾರಿಗೂ ಅಧಿಕಾರ ಇಲ್ಲ. ಇದರಲ್ಲಿ ನನ್ನ ಹೆಸರು ತಂದಿರುವುದಕ್ಕೆ ಮಾತ್ರ ನಾನು ಸೀಮಿತವಾಗಿದ್ದೀನಿ. ದೂರು ಕೊಟ್ಟು ಮಾತನಾಡುತ್ತೀನಿ ಎಂದರು.
ಧರ್ಮಸ್ಥಳದ ಬಗ್ಗೆ ಮಾತಡಲ್ಲ