
ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಮೂವರ ವಿರುದ್ಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾಗಿದ್ದ ಬಸ್ ಕಂಡಕ್ಟರ್ ತನ್ವೀರ್ ಹೊರಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕಾರಿಪುರದಿಂದ ಮುಡುಬ ಸಿದ್ದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಮೇಲೆ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಹಲ್ಲೆ ನಡೆಸಿದ್ದರು. ಶಿಕಾರಿಪುರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಗೆ ಕೆಲ ಪ್ರಯಾಣಿಕರು ಡ್ರೈವರ್ ಸೀಟ್ ಬಾಗಿಲು ಮೂಲಕ ಬಸ್ ಹತ್ತುತ್ತಿದ್ದರು. ಡ್ರೈವರ್ ಸೀಟ್ ಬಾಗಿಲಿನಿಂದ ಬಸ್ ಹತ್ತಬೇಡಿ ಎಂದು ಅವರನ್ನು ಕಂಡಕ್ಟರ್ ಕೆಳಗಿಳಿಸಿದ್ದರು. ಅಲ್ಲದೇ ಹಿಂದಿನ ಬಾಗಿಲಿನಿಂದ ಬಸ್ ಹತ್ತಲು ಹೇಳಿ ಹತ್ತಿಸಿಕೊಂಡಿದ್ದರು. ಬಸ್ ಸಿದ್ದಾಪುರಕ್ಕೆ ತೆರಳಿ ವಾಪಸ್ ಆಗುವಾಗ ಕೋಟಿಪುರದ ಬಳಿ ಬಸ್ ತಡೆದ ಕೆಲವರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್ ದೂರು ದಾಖಲಿಸಿದ್ದರು. ಇದೀಗ ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.