ಪ್ರಗತಿವಾಹಿನಿ ಸುದ್ದಿ, ಕಮಲದಿನ್ನಿ (ಮೂಡಲಗಿ):
ತಾವು ಕಲಿಯಲು ಸಾಧ್ಯವಾಗದಿದ್ದರೂ ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ ಎನ್ನುವ ಮಹೋನ್ನತ ಧ್ಯೇಯದೊಂದಿಗೆ ಪ್ರಗತಿಪರ ರೈತರೊಬ್ಬರು 18 ಲಕ್ಷ ರೂ. ವೆಚ್ಚದ ಬಸ್ ಒಂದನ್ನು ಖರೀದಿಸಿ ಶಾಲೆಗೆ ದೇಣಿಗೆ ನೀಡಿದ್ದಾರೆ.
ಮೂಡಲಗಿ ತಾಲೂಕಿನ ಕಮಲದಿನ್ನಿಯ ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆ ನಡೆಸುವ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ರಡ್ಡಿ ಬಸ್ ಕೊಡುಗೆ ನೀಡಿದ್ದಾರೆ. ಇದರಿಂದಾಗಿ ಸುಮಾರು 7-8 ಕಿಮೀ ದೂರದಿಂದ ಶಾಲೆಗೆ ಬರುವ ಮಕ್ಕಳಿಗೆ ಅನುಕೂಲವಾಗಿದೆ.
ಕೇವಲ 8ನೇ ತರಗತಿವರೆಗೆ ಓದಿರುವ ಬಿ.ಎಚ್.ರಡ್ಡಿ ಪ್ರಗತಿಪರ ರೈತರು. ಕಷ್ಟದ ಪರಿಸ್ಥಿತಿಯಲ್ಲೂ ಹೇಗೆ ರೈತರು ಸಾಧನೆ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ. ಸಧ್ಯಕ್ಕೆ ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆಯ ಚೇರಮನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕಮಲದಿನ್ನಿಯಲ್ಲಿ 1991-92ರಲ್ಲಿ ರಂಗಪ್ಪ ಹ. ರಡ್ಡಿ ಅವರು ಮಹಾತ್ಮಾ ಗಾಂಧಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಳ್ಳಿ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದೀಗ ಬಿ.ಎಚ್.ರಡ್ಡಿ ಅವರು ತಮ್ಮ ಮಗಳ ಸ್ಮರಣಾರ್ಥ ಬಸ್ ದೇಣಿಗೆ ನೀಡಿದ್ದಾರೆ.
ಸುಣಧೋಳಿಯ ಜಡಿಸಿದ್ದೇಶ್ವರ ಮಠ ಶ್ರೀ ಶಿವಾನಂದ ಸ್ವಾಮಿಗಳು ಬಸ್ ಗೆ ಪೂಜೆ ಸಲ್ಲಿಸಿದ್ದಲ್ಲದೆ, ರಡ್ಡಿ ಅವರನ್ನು ಗ್ರಾಮಸ್ಥರ ಪರವಾಗಿ ಸತ್ಕರಿಸಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಂಕರ ಬುದ್ನಿ, ಆಡಳಿತ ಮಂಡಳಿ ಸದಸ್ಯರು, ಕಮಲದಿನ್ನಿ ಗ್ರಾಮದ ಪ್ರಮುಖರು, ಶಾಲೆ ಮುಖ್ಯಾಧ್ಯಾಪಕರು, ಶಿಕ್ಷಕರು ಈಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಲ್ಲಿಯವರೆಗೆ ಬಾಡಿಗೆ ಆಧಾರದ ಮೇಲೆ ಬಸ್ ಓಡಿಸಲಾಗುತ್ತಿತ್ತು. ಇದೀಗ ಶಾಲೆಗೆ ಸ್ವಂತ ಬಸ್ ಆದಂತಾಗಿದೆ. ಬಸ್ ದೇಣಿಗೆ ನೀಡುವ ಮೂಲಕ ಬಿ.ಎಚ್.ರಡ್ಡಿ ಎಲ್ಲರಿಗೂ ಆದರ್ಶರಾಗಿದ್ದಾರೆ.
– ರಂಗಪ್ಪ ಹ. ರಡ್ಡಿ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ