ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಇತ್ತ ಬೆಂಗಳೂರು ಬಂದ್ ಗೆ ಕರೆ ನೀಡಿದ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿದ್ದರೆ ಅತ್ತ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಬಸ್ ಗಳು ರಾಜ್ಯದ ಗಡಿ ಪ್ರವೇಶಿಸದ ಕಾರಣ ಪ್ರಯಾಣಿಕರು ತೊಂದರೆಯಲ್ಲಿ ಸಿಲುಕಿದ್ದಾರೆ.
ತಮಿಳುನಾಡಿನ ಬಸ್‌ಗಳು ಕೃಷ್ಣಗಿರಿ ಜಿಲ್ಲೆಯ ಝುಜುವುಡಿಯವರೆಗಷ್ಟೇ ಬರುತ್ತಿವೆ. ಹೀಗಾಗಿ ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ.
ಶಾಂತಿನಗರ, ಸ್ಯಾಟ್ ಲೈಟ್ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಜನ ಬಸ್ ಗಳಿಗೆ ಕಾದುಕಾದು ಸುಸ್ತಾಗಿ ಕುಳಿದ ದೃಶ್ಯ ಸಾಮಾನ್ಯವಾಗಿತ್ತು. ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ತಮಿಳುನಾಡಿನ ಬಹುತೇಕ ಎಲ್ಲ ಬಸ್ ಗಳನ್ನು ಸೋಮವಾರವೇ ಅಲ್ಲಿನ ಸರಕಾರ ವಾಪಸ್ ಕರೆಸಿಕೊಂಡಿತ್ತು.
ಇತ್ತ ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುವವರು ಸಹ ಬಸ್ ವ್ಯವಸ್ಥೆ ಇಲ್ಲದೆ ಪರದಾಟ ನಡೆಸಿದ್ದಾರೆ. ಕೆಲವರು ಕಂಡಕಂಡ ಖಾಸಗಿ ವಾಹನಗಳನ್ನು ಹತ್ತಿಕೊಂಡು ಹೇಗಾದರೂ ತಲುಪಬೇಕಾದ ಸ್ಥಳಕ್ಕೆ ತಲುಪಲು ಹೆಣಗಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ