ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‘ಸ್ಮಾರ್ಟ್ ಸಿಟಿ’ ಆಗುತ್ತಿರುವ ಬೆಳಗಾವಿಯ ಸ್ಮಾರ್ಟ್ ಬಸ್ ನಿಲ್ದಾಣ ಆಮೆ ಗತಿಯಲ್ಲಾದರೂ ಜನರ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟುತ್ತಲೇ ಸಾಗಿದೆ. ಇದೇ ವೇಳೆ ಇಲ್ಲಿನ ನಂ.1 ತಂಗುದಾಣ ಈಗ ಎಲ್ಲರ ಕಣ್ ದೃಷ್ಟಿ ಸೆಳೆಯುತ್ತಿದೆ.
ಸ್ಮಾರ್ಟ್ ಸಿಟಿಯ ನಂ.1 ತಂಗುದಾಣ ಅದ್ಯಾವ ಪರಿ ಇದ್ದೀತು ಎಂದು ಗರಿಗರಿಯಾಗಿ ಕನಸು ಕಂಡರೆ ಮೋಸ ಹೋಗುವುದು ನಿಶ್ಚಿತ. ಇಷ್ಟಕ್ಕೂ ಈ ತಂಗುದಾಣ ‘ನಂ.1’ ಯಾಕೆಂದರೆ ಕೇಂದ್ರ ಬಸ್ ನಿಲ್ದಾಣದಿಂದ (ಸಿಬಿಟಿ) ಬಸ್ ಡಿಪೋದಿಂದ ಒಮ್ಮೆ ಬಸ್ ಹೊರಬಂತೆಂದರೆ ಇದು ಆರ್‌ಟಿಒ ಸರ್ಕಲ್ ಕಡೆಗೆ ಬರುವಾಗ ಕಿಲ್ಲಾ ಕೆರೆ ಬಳಿ ಸಿಗುವ ಮೊದಲ ಬಸ್ ತಂಗುದಾಣವಾಗಿದೆ. ಇದೀಗ ಅವ್ಯವಸ್ಥೆಯಲ್ಲೂ ನಂ.1 ಸ್ಥಾನದ ಪೈಪೋಟಿಯಲ್ಲಿ ಇರುವಂತಿದೆ.
ಬಸ್ ತಂಗುದಾಣದ ಸ್ಥಿತಿಯನ್ನು ಕಣ್ಣಾರೆ ಕಂಡುಬಿಟ್ಟರೆ ಸ್ಮಾರ್ಟ್ ಸಿಟಿಯ ಸೌಂದರ್ಯಕ್ಕಿಷ್ಟು ಕಳಂಕಪ್ರಾಯ ಎನ್ನದೆ ಇರಲಾಗದು. ಇದರ ಸಂಪೂರ್ಣ ತುಕ್ಕು ಹಿಡಿದ ತಗಡುಗಳು, ಪಟ್ಟಿಗಳು ಅಲ್ಲಲ್ಲಿ ಅಪಾಯಕಾರಿ ರೀತಿಯಲ್ಲಿ ನೇತಾಡುತ್ತಿವೆ. ತುಕ್ಕು ಬಂದು ಮುಂಭಾಗದ ಛಾವಣಿ ಯಾವಾಗ ಬೇಕಾದರೂ ನೆಲಕ್ಕುರುಳಬಹುದು. ಸುಮ್ಮನೆ ನೆಲಕ್ಕುರುಳಿದರೆ ಸಮಸ್ಯೆಯಿಲ್ಲ. ಇದರಡಿ ನಿಲ್ಲುವ ಪ್ರಯಾಣಿಕರ ಮೇಲೆ ಬಿದ್ದರೆ ದುರಂತವಾಗುವುದು ನಿಶ್ಚಿತ.
ಇಷ್ಟಕ್ಕೂ ಈ ತಂಗುದಾಣದಲ್ಲಿ ಕುಳಿತುಕೊಳ್ಳಲು ಆಸನಗಳಿಲ್ಲ. ಕಾರಣ ಜನ ಬಸ್ ಗಾಗಿ ಕುಳಿತು ಕಾಯಬೇಕಿಲ್ಲ, ಬಸ್ ಸೇವೆ ತುಂಬ ತ್ವರಿತವಾಗಿದೆ ಎಂದು ಭಾವಿಸಿದರೆ ಭ್ರಮನಿರಸನವಾದೀತು. ಆಸನಗಳೆಲ್ಲ ಯಾರ ಪಾಲಾಗಿವೆಯೋ ತಿಳಿದಿಲ್ಲ. ಅವುಗಳ ಆಧಾರ ಕಂಬಗಳಷ್ಟೇ ಉಳಿದಿವೆ.
ಬಸ್ ನಿಲ್ದಾಣದ ದುರವಸ್ಥೆಯಿಂದಾಗಿ ಪ್ರಯಾಣಿಕರು ಇಲ್ಲಿ ಒಂದು ಕ್ಷಣ ಕೂಡ ನಿಲ್ಲಲು ಇಚ್ಛೆಪಡದೆ ಕಿಲ್ಲಾ ಕೆರೆಯ ಸಿಗ್ನಲ್ ಬಳಿ ನಿಂತಿರುವುದು ಕಂಡು ಬರುತ್ತಿದೆ. ಇದಕ್ಕೊಂದು ಸ್ಮಾರ್ಟ್ ರೂಪ ನೀಡುವ ಮುಹೂರ್ತ ಯಾವಾಗ ಬರುವುದೋ ಎಂದು ಪ್ರಯಾಣಿಕರು ಕಾಯುತ್ತಿದ್ದಾರೆ.
ಹಾಸ್ಟೇಲ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ