Latest

ಪುಕ್ಕಟೆ ಪ್ರಚಾರಕ್ಕಾಗಿ ಫೋಟೋ ತೆಗೆಯುವ ಅಮಾನವೀಯ ವರ್ತನೆ

 200 -300 ರೂ. ಖರ್ಚು ಮಾಡಿ, ಹತ್ತೋ, ಇಪ್ಪತ್ತೋ ಬಿಸ್ಕಿಟ್ ಪ್ಯಾಕ್ ಕೊಟ್ಟು, ಹತ್ತಿಪ್ಪತ್ತು ಮಾಸ್ಕ್ ಕೊಟ್ಟು ಫೋಟೋ ತೆಗೆಸಿಕೊಂಡು ಮಾಧ್ಯಮಗಳಲ್ಲಿ ಸಾವಿರಾರು ರೂ.ಗಳ ಜಾಹಿರಾತಿನಷ್ಟು ಪ್ರಚಾರ ಪಡೆಯುವವರ ಹಾವಳಿ ಅತಿಯಾಗಿದೆ.

ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಒದ್ದಾಡುವವರಿಗೆ, ಕಷ್ಚದಲ್ಲಿರುವವರಿಗೆ ಸಹಾಯ ಮಾಡುವ ನೆಪದಲ್ಲಿ ಏನೋ ಕೊಟ್ಟ ಹಾಗೆ ಮಾಡಿ ಫೋಟೋ ತೆಗೆಸಿಕೊಂಡು ಅವುಗಳನ್ನು ಎಲ್ಲಾ ಮಾಧ್ಯಮಗಳಿಗೆ ಕೊಟ್ಟು ಪುಕ್ಕಟೆ ಪ್ರಚಾರ ಪಡೆಯುತ್ತಾರೆ.

ಲಕ್ಷಾಂತರ ರೂ. ಮೊತ್ತದ ದೇಣಿಗೆ ನೀಡುವವರು ಈ ರೀತಿ ಪ್ರಚಾರ ಪಡೆಯುವುದೂ ತಪ್ಪಲ್ಲ, ಪ್ರಚಾರ ಕೊಡುವುದೂ ತಪ್ಪಲ್ಲ. ಅಂತವರು ಇತರರಿಗೆ ಮಾದರಿಯಾಗುತ್ತಾರೆ. ಆದರೆ ನೂರಿನ್ನೂರು ರೂ. ಗಳ ಸಾಮಗ್ರಿ ಹಂಚಿ ಫೋಟೋ ತೆಗೆಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿಯೇ ಸರಿ. ದೇಣಿಗೆ ಸ್ವೀಕರಿಸುವವರಿಗೆ ಮಾಡುವ ಅವಮಾನವಲ್ಲದೆ ಇನ್ನೇನೂ ಅಲ್ಲ.

ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು ಎನ್ನುವ ಮಾತಿದೆ, ಆದರೆ ಇಲ್ಲಿ ಎಡಗೈಲಿ ಕೊಟ್ಟು ಬಲಗೈಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. 

Home add -Advt

ರಾಜಸ್ಥಾನದಲ್ಲಿ ಕೊರೋನಾ ಸಂದರ್ಭದಲ್ಲಿ ಹಸಿದವರಿಗೆ ಆಹಾರ ಸಾಮಗ್ರಿ ನೀಡಿ ಫೋಟೋ ತೆಗೆಸಿಕೊಳ್ಳುವುದನ್ನು ಬ್ಯಾನ್ ಮಾಡಲಾಗಿದೆ. ಅಜ್ಮೀರ್ ಜಿಲ್ಲಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ದೇಣಿಗೆ ನೀಡುವುದಾದರೆ ನೀಡಿ, ಆದರೆ ಸೆಲ್ಫಿ ತೆಗೆದರೆ ಕ್ರಮ ಎಂದಿದ್ದಾರೆ. ಇದೊಂದು ಮಾನವೀಯ ಕ್ರಮವಾಗಿದೆ.

ಬೇರೆಯವರಿಂದ ದಾನ ಪಡೆಯಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ ದಾನ ಪಡೆಯುವವರು ಆ ಸಂದರ್ಭದ ಅನಿವಾರ್ಯತೆಗೆ ಸಿಲುಕುತ್ತಾರೆ. ಅವರ ಸ್ಥಿತಿ ನಿಜಕ್ಕೂ ಕರುಣಾಜನಕವಾಗಿರುತ್ತದೆ. ಅಂತವರಿಗೆ ದಾನ ನೀಡಿ ಫೋಟೋ ತೆಗೆಸಿಕೊಳ್ಳುವುದು ನಾಚಿಕೆಗೇಡಿನ, ಅಷ್ಟೇ ಅಮಾನವೀಯ ವರ್ತನೆಯೇ ಸರಿ.

ಕಳೆದ 15 ದಿನಗಳಿಂದ ಇಂತವರು ಹೆಚ್ಚಾಗಿದ್ದಾರೆ. ಹತ್ತಾರು ಪ್ಯಾಕ್ ಬಿಸ್ಕೀಟ್, ಹತ್ತಿಪ್ಪತ್ತು ಮಾಸ್ಕ್ ದೇಣಿಗೆ ನೀಡಿ ದೊಡ್ಡ ದೊಡ್ಡ ಪ್ರಚಾರ ಪಡೆಯುತ್ತಾರೆ. ಹೆಚ್ಚೆಂದರೆ ಇವರು ಖರ್ಚು ಮಾಡುವುದು 400 -500 ರೂ.

ರಾಜ್ಯದಲ್ಲೂ ರಾಜಸ್ಥಾನದಂತಹ ಕಾನೂನು ಜಾರಿಗೆ ತರಬೇಕು. ಕನಿಷ್ಟ ಲಕ್ಷ ರೂ. ಮೊತ್ತದ ದೇಣಿಗೆ ನೀಡಿದರೆ ಅಂತವರು ಫೋಟೋ ತೆಗೆದು ಪ್ರಚಾರ ಪಡೆದರೆ ತಪ್ಪಲ್ಲ. ಆದರೆ ಫೋಟೋ ಪ್ರಚಾರಕ್ಕಾಗಿಯೇ ದಾನ ನೀಡುವುದು, ನೀಡಿದಂತೆ ನಟಿಸುವುದನ್ನು ನಿಷೇಧಿಸಬೇಕು.

-ಸವಿತಾ ಆರ್. ಬೆಳಗಾವಿ

Related Articles

Back to top button