Kannada NewsKarnataka NewsLatest

ಉಪಚುನಾವಣೆ: ಕಾಂಗ್ರೆಸ್ ಟಿಕೆಟ್ ಗೆ ಬೆಳಗಾವಿ ಅಳಿಯನ ಯತ್ನ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ರಾಜಕೀಯ ಚಟುವಟಿಕೆಗಳು ತೀವ್ರವಾಗಿವೆ.

ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆಗೆ ಹುಡುಕಾಟ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಮಾಜಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ 11 ಜನರ ಸಮಿತಿ ರಚನೆ ಮಾಡಿದ್ದು ಒಂದು ಬಾರಿ ಸಭೆ ಸೇರಿ ಚರ್ಚಿಸಿದೆ. ಒಂದೇ ವಾರದಲ್ಲಿ 2ನೇ ಸಭೆ ನಡೆಸುವುದಾಗಿ ಹೇಳಲಾಗಿತ್ತು. ಆದರೆ ಈವರೆಗೂ 2 ನೇ ಸಭೆ ಆಗಿಲ್ಲ.

ಈ ಮಧ್ಯೆ 11 ಸದಸ್ಯರ ಸಮಿತಿಯ ಸದಸ್ಯರಲ್ಲೊಬ್ಬರಾದ ಅನಿಲ ಲಾಡ್ ಬೆಳಗಾವಿಯಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ  ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಅನಿಲ ಲಾಡ್ ಪರ ಧ್ವನಿ ಎತ್ತಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಅಳಿಯನಾಗಿರುವ ಅನಿಲ ಲಾಡ್ ಈಚೆಗೆ ಬೆಳಗಾವಿ ಆಗಮಿಸಿ ಕರ್ನಾಟಕ ಮರಾಠಾ ಕ್ಷತ್ರೀಯ ಪರಿಷತ್ ಪದಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಕ್ಯಾಂಪ್ ಪ್ರದೇಶದಲ್ಲಿರುವ ತಮ್ಮ ಗೆಸ್ಟ್ ಹೌಸ್ ನಲ್ಲಿ ಅವರು ಸಭೆ ನಡೆಸಿ, ಗಡಿಭಾಗದ ಮರಾಠಾ ಜನರ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಹಾಗೂ ರಾಜಕೀಯ ಏಳ್ಗೆ ಬಗ್ಗೆ ಸಮಾಲೋಚಿಸಿದ್ದಾರೆ.

ಸಂಜೀವ ಸದಾನಂದ ಭೋಸಲೆ, ಕೆ.ಕೆ.ಎಮ್.ಪಿ. ಬೆಳಗಾವಿ ಪೂರ್ವವಿಭಾಗದ ಅಧ್ಯಕ್ಷ ಬಸುರಾಜ ಮ್ಯಾಗೋಟೆ, ಖಾನಾಪುರ ಕೆ.ಕೆ.ಎಮ್.ಪಿ. ಉಪಾಧ್ಯಕ್ಷ  ದೀಲಿಪ ಪವಾರ, ಉಳಿದ ಮರಾಠಾ ಜನರು ರಾಹುಲ ಪವಾರ, ಪ್ರಶಾಂತ ಭಾತಕಾಂಡೆ, ಸಂಜಯ ಸಿಂದೆ ರಾಜು ಬಿರ್ಜೆ, ಹಣಮಂತ ಗುರು, ಪಾಂಡುರಂಗ ಪಾಟೀಲ, ತಾನಾಜಿ ಕದಮ, ಶಿವರಾಜ ಪಾಟೀಲ ಉಪಸ್ಥಿತರಿದ್ದರು.

ಅನಿಲ ಲಾಡ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷವಾದ ಸಂಪರ್ಕ ಇಲ್ಲ. ಅವರಿಗೂ ಕ್ಷೇತ್ರ ಗೊತ್ತಿಲ್ಲ, ಕ್ಷೇತ್ರಕ್ಕೂ ಅವರು ಗೊತ್ತಿಲ್ಲ. ಆದರೆ ಕಾಂಗ್ರೆಸ್ ನಲ್ಲೇ ಕೆಲವರು ಅವರನ್ನು ಕಣಕ್ಕಿಳಿಸಬೇಕೆನ್ನುವ ಪ್ರಯತ್ನ ಮಾಡುತ್ತಿರುವುದು ವಿಶೇಷವಾಗಿದೆ.

ಒಂದು ಹಂತದಲ್ಲಿ ಅನಿಲ ಲಾಡ್ ತಾವು ಕಣಕ್ಕಿಳಿಯಲು ಆಸಕ್ತಿ ಹೊಂದಿಲ್ಲ ಎಂದೂ ಹೇಳಿದ್ದಾರೆ. ಆದರೂ ಅವರ ಪರ ಲಾಬಿ ಮಾಡುವವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದವರು. ಅವರಿಗೆ ಬೆಳಗಾವಿಯಲ್ಲಿ ಟಿಕೆಟ್ ಕೊಡುವುದಿಲ್ಲ. ಈ ಕ್ಷೇತ್ರ ವ್ಯಾಪ್ತಿಯಲ್ಲೇ ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ ಎಂದಿದ್ದ ಸತೀಶ್ ಜಾರಕಿಹೊಳಿ ಅನಿಲ ಲಾಡ್ ಸ್ಪರ್ಧೆ ಕುರಿತು ಆಸಕ್ತಿ ತೋರಿಸಿದ್ದು ನಿಜವಾದಲ್ಲಿ ಆಶ್ಚರ್ಯವೇ ಸರಿ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button