Latest

ಗಟ್ಟಿಯಾಯ್ತು ಯಡಿಯೂರಪ್ಪ ಖುರ್ಚಿ, ವಿಜಯೇಂದ್ರ ಉತ್ತರಾಧಿಕಾರಿತ್ವ

ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ನಡೆದ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಭೇರಿ ಭಾರಿಸಿದೆ. ತನ್ನದಲ್ಲದ ಕ್ಷೇತ್ರಗಳನ್ನು ಬಿಜೆಪಿ ತನ್ನ ವಶಕ್ಕೆ ಪಡೆದಿದೆ.

ಆರ್ ಆರ್ ನಗರದಲ್ಲಿ ಮುನಿರತ್ನ ಹಾಗೂ ಶಿರಾದಲ್ಲಿ ಡಾ.ರಾಜೇಶ ಗೌಡ ಗೆಲುವು ಸಾಧಿಸಿದ್ದಾರೆ. ಮುನಿರತ್ನ ಕ್ಷೇತ್ರದ ಹಾಲಿ ಶಾಸಕರಾಗಿದ್ದು, 3ನೇ ಬಾರಿಗೆ ಗೆಲುವುದು ಸಾಧಿಸಿದ್ದಾರೆ. ಮೊದಲ ಚುನಾವಣೆಯಲ್ಲಿ ಅವರು 17 ಸಾವಿರ, 2ನೇ ಚುನಾವಣೆಯಲ್ಲಿ 26 ಸಾವಿರ ಹಾಗೂ 3ನೇ ಚುನಾವಣೆಯಲ್ಲಿ 57 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಯಡಿಯೂರಪ್ಪ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಕೆ.ಆರ್ ಪೇಟೆಯಲ್ಲೂ ವಿಜಯೇಂದ್ರ ಉಸ್ತುವಾರಿಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಈಗ ಕೂಡ ಗೆದ್ದಿದೆ.

ಈ ಚುನಾವಣೆ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಖುರ್ಚಿಯನ್ನು ಗಟ್ಟಿಗೊಳಿಸಿದೆ. ಜೊತೆಗೆ ವಿಜಯೇಂದ್ರ ಅವರಿಗೆ ರಾಜಕೀಯ ಭವಿಷ್ಯವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗುವ ದಿಕ್ಕಿನಲ್ಲಿ ಇನ್ನಷ್ಟು ಬಲವಾಗಿ ಅವರು ಸಾಗುವಂತಾಗಿದೆ.

Home add -Advt

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಿಸಲು ಪಕ್ಷದಲ್ಲೇ ಕಸರತ್ತು ನಡೆಯುತ್ತಿತ್ತು. ಜೊತೆಗೆ ಹೈಕಮಾಂಡ್ ಕೂಡ ಈ ದಿಸೆಯಲ್ಲಿ ಯೋಚಿಸುತ್ತಿದೆ ಎನ್ನುವ ಸುದ್ದಿ ಇತ್ತು. ಆದರೆ ಈ ಉಪಚುನಾವಣೆ ಫಲಿತಾಂಶದ ನಂತರ ಇಂತಹ ಚಟುವಟಿಕೆಗಳಿಗೆ ಹಿನ್ನಡೆಯಾಗಬಹುದು.

ಜೊತೆಗೆ, ವಿಜಯೇಂದ್ರ ಅವರಿಗೆ ಬಸವಕಲ್ಯಾಣದ ಟಿಕೆಟ್ ನೀಡಬೇಕೆನ್ನುವ ಒತ್ತಡಕ್ಕೂ ಬಲಬಂದಂತಾಗಿದೆ. ಅವರಿಗೆ ಟಿಕೆಟ್ ಸಿಗುತ್ತೋ ಇಲ್ಲವೋ, ಆದರೆ ವಿಜಯೇಂದ್ರ ಪಕ್ಷದಲ್ಲಿ ಗಟ್ಟಿಯಾಗುತ್ತ ಸಾಗುತ್ತಿರುವುದಂತೂ ನಿಜ. ಅವರು ಪಕ್ಷ ಸಂಘಟನೆಯಲ್ಲಿ ಇನ್ನಷ್ಟು ಮುತುವರ್ಜಿಯಿಂದ ತೊಡಗಿಕೊಳ್ಳಬಹುದು.

ಒಟ್ಟಾರೆ ಈ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಉಂಟುಮಾಡಿದ್ದು, ಪಕ್ಷ ತನ್ನ ನೀತಿ ನಿಯಮವನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

 

Related Articles

Back to top button